'ಹೊ!ಚಂದ್ರೇಗೌಡ್ರೇ ಬನ್ನಿ ಬನ್ನಿ. ನೀವು ಮೊನ್ನೆ ಹಾಕಿದ್ದ ಚೆಕ್ ಕ್ಯಾಶ್ ಆಗಿ ಖಾತೆಗೆ ಜಮಾ ಆಗಿದೆ'- ಹೀಗೆಂದು ಬ್ಯಾಂಕ್‌ಗಳಲ್ಲಿ ಗ್ರಾಹಕರ ಉಭಯ ಕುಶಲೋಪರಿ ವಿಚಾರಿಸುವ ದಿನಗಳೂ ಇದ್ದವು. ಅಂಥ ಮನೋಭಾವದ ಅಧಿಕಾರಿಗಳೂ ಇದ್ದರು. ಆದರೆ ಅಂಥ ಮನಸ್ಥಿತಿಯವರು ಈಗ ದಿನೇ ದಿನೇ ಕುಗ್ಗುತ್ತಿದ್ದಾರೆ.
ಹಿಂದಿನ ಕತೆ ಏನಿತ್ತು?
ಹಿಂದೆ ಗ್ರಾಹಕರ ಖಾತೆ ಹಣ ಜಮೆಯಾಗಿದ್ದರೆ, ಏನಾದರೂ ತಪ್ಪಾಗಿದ್ದರೆ ಬ್ಯಾಂಕ್ ವತಿಯಿಂದಲೇ ಆತ್ಮೀಯವಾಗಿ ಫೋನ್ ಮಾಡಿ ವಿವರ ನೀಡುತ್ತಿದ್ದರು. (ಈಗಲೂ ಅಂಥ ವ್ಯವಸ್ಥೆ ಇದೆ. ಆದರೆ ಆತ್ಮೀಯತೆ ಕಣ್ಮರೆಯಾಗಿದೆ).
ಈಗ ಇಂಥ ಕೆಲಸವೇನಿದ್ದರೂ 'ಕಸ್ಟಮರ್ ರಿಲೇಷನ್ ಎಕ್ಸಿಕ್ಯೂಟಿವ್' ಅಥವಾ ಗ್ರಾಹಕ ಸೇವಾ ಅಧಿಕಾರಿಯ ವ್ಯಾಪ್ತಿಗೆ ಬರುತ್ತದೆ.
ಎಲ್ಲ ಬದಲಾಗಿದೆ!
ಜಾಗತೀಕರಣ ಮತ್ತು ಆರ್ಥಿಕ ಉದಾರ ನೀತಿಯ ಫಲವೋ ಗೊತ್ತಿಲ್ಲ. ಬ್ಯಾಂಕ್‌ಗಳಲ್ಲಿ ಕಾರ್ಯವೈಖರಿ ಬದಲಾಗಿದೆ. ಸಿಬ್ಬಂದಿ ಹಾಗೂ ಅವರ ಕೆಲಸದ ಶೈಲಿಯಲ್ಲಿ ಆಮೂಲಾಗ್ರವಾಗಿ ಬದಲಾಗಿದೆ. ವ್ಯವಹಾರದಲ್ಲಿ ಗ್ರಾಹಕರ ಜತೆಗಿನ ವೈಯಕ್ತಿಕ ಬಾಂಧವ್ಯ ಮರೆಯಾಗಿ, ಕೇವಲ ವ್ಯಾವಹಾರಿಕ ವಿಚಾರಗಳಷ್ಟೇ ಪ್ರಸ್ತಾಪವಾಗುತ್ತವೆ. ಕಂಪ್ಯೂಟರಿನ ಹಿಂದೆ ಮರೆಯಾಗಿ ಕುಳಿತವರ ಮುಖಗಳು ಕಾಣಿಸುವುದೇ ಇಲ್ಲ.
ಇದಕ್ಕೆಲ್ಲ ಏನು ಕಾರಣ?
35 ವರ್ಷಗಳ ಹಿಂದೆ ಬಹಳ ದೊಡ್ಡ ಉದ್ಯೋಗವೆಂದರೆ ಬ್ಯಾಂಕ್ ಕೆಲಸ. ನಂತರ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಬಂದವು ಬಿಡಿ. ವಿಶೇಷವಾಗಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಅದುವೇ ಅಂತಿಮವಾಗಿತ್ತು. ಕನ್ಯಾಪಿತೃಗಳು ಕೂಡ ಬ್ಯಾಂಕಿನಲ್ಲಿ ಕೆಲಸ ಮಾಡುವವರಿಗೇ ಮಗಳನ್ನು ಕೊಡಲು ಹೆಚ್ಚಿನ ಉತ್ಸಾಹ ತೋರುತ್ತಿದ್ದರು. ಏಕೆಂದರೆ ಅವರಿಗೆ ಸಿಗುತ್ತಿದ್ದ ಮರ್ಯಾದೆ ಕೂಡ ಗರಿಷ್ಠ ಮಟ್ಟದ್ದೇ ಆಗಿರುತ್ತಿತ್ತು. ಪ್ರಪಂಚದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ಆಯ್ದುಕೊಳ್ಳುವವರ ಸಂಖ್ಯೆ ತಗ್ಗಿತು. ಉಳಿದ ಉದ್ಯೋಗದಲ್ಲಿ ಸಿಗುವ ವಿದೇಶ ಪ್ರವಾಸ ಮತ್ತು ಇತರ ಆಕರ್ಷಣೆಗಳು ಬ್ಯಾಂಕಿಂಗ್ ಕ್ಷೇತದ ಆಕರ್ಷಣೆಯನ್ನು ಕುಗ್ಗಿಸಿದವು.
ಕನ್ನಡವೇ ಬರಲ್ಲ!
ಬೆಂಗಳೂರಿನಲ್ಲಿರುವ ಕೆಲ ಬ್ಯಾಂಕ್ ಶಾಖೆಗಳಲ್ಲಿರುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ. ಪ್ರಮುಖ ಬ್ಯಾಂಕ್ ಒಂದರ ಶಾಖೆಗೆ ಅದರ ಗ್ರಾಹಕರೊಬ್ಬರು ಕನ್ನಡದಲ್ಲಿ ಪತ್ರ ಬರೆದಿದ್ದರು. ಆ ಅಧಿಕಾರಿಗಳು, ಗ್ರಾಹಕರೊಬ್ಬರ ಮೂಲಕ ಆ ಪತ್ರವನ್ನು ಓದಿಸಿಕೊಂಡರಂತೆ.
- ರಮಾನಂದ ಶರ್ಮಾ