ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಅಂಚೆ ಬ್ಯಾಂಕ್

Vishwanath S
Updated On : 21 Jul 2013, 4:19 am

ಆರ್‌ಬಿಐ ಹೊಸ ಬ್ಯಾಂಕ್‌ಗಳ ಆರಂಭಕ್ಕೆ ಪ್ರಮುಖ ಖಾಸಗಿ ಸಂಸ್ಥೆಗಳಿಂದ ಅರ್ಜಿಗಳನ್ನು ಸ್ವೀಕರಿಸಿದೆ. ಅದರ ಜತೆಗೆ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆಯೂ ಹಣಕಾಸಿನ ವ್ಯವಹಾರಕ್ಕೆ ಧುಮುಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದ ನಿರೀಕ್ಷೆಯ ಪ್ರಕಾರ, 2014ರ ಮಾರ್ಚ್ ವೇಳೆಗೆ ಮತ್ತೊಂದು 'ಸರ್ಕಾರಿ ಬ್ಯಾಂಕ್‌' ಕಾರ್ಯಾರಂಭಿಸುವ ಸಾಧ್ಯತೆ ಇದೆ.
ಈಗಾಗಲೇ 28 ಸಾರ್ವಜನಿಕ ರಂಗದ, 20 ಖಾಸಗಿ ರಂಗದ ಮತ್ತು 41 ವಿದೇಶಿ ಬ್ಯಾಂಕ್‌ಗಳ 92 ಸಾವಿರ ಶಾಖೆಗಳು ದೇಶಾದ್ಯಂತ ವಹಿವಾಟು ನಡೆಸುತ್ತಿವೆ.
ಅಂಚೆ ಇಲಾಖೆ ವ್ಯಾಪ್ತಿ
ದೇಶದ 6,38,596 ಹಳ್ಳಿಗಳ ಪೈಕಿ 1,54, 866 ಅಂಚೆ ಕಚೇರಿಗಳಿವೆ. ಒಂದು ಅಂದಾಜಿನ ಪ್ರಕಾರ 21.23 ಚದರ ಕಿ.ಮೀ.ಗೆ ಒಂದು ಅಂಚೆ ಕಚೇರಿಯಿದೆ. ದೇಶಾದ್ಯಂತ ಒಟ್ಟು 22 ಅಂಚೆ ಇಲಾಖೆ ವೃತ್ತಗಳಿವೆ.
ಅಂಚೆ ಬ್ಯಾಂಕ್ ಅನುಕೂಲ
ಬ್ಯಾಂಕ್ ಶಾಖೆಗಳ ಪೈಕಿ ಹಳ್ಳಿಗಳಲ್ಲಿ ಬ್ಯಾಂಕ್ ಇರುವುದು ಕೇವಲ 35 ಸಾವಿರ ಹಳ್ಳಿಗಳಲ್ಲಿ ಮಾತ್ರ. ಆದರೆ 6.28 ಲಕ್ಷ ಹಳ್ಳಿಗಳಲ್ಲಿ ಅಂಚೆ ಕಚೇರಿಗಳು ಇರುವುದರಿಂದ ಪ್ರತಿ ಹಳ್ಳಿಗೂ ಬ್ಯಾಂಕ್ ಶಾಖೆ ಎಂಬ ಸರ್ಕಾರದ ಕನಸು ನನಸಾಗಲು ಸಾಧ್ಯ.
 ಪ್ರತಿ 13 ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್ ಶಾಖೆ ಇದ್ದರೆ, ಸುಮಾರು 8 ಸಾವಿರ ಜನರಿಗೆ ಒಂದು ಅಂಚೆ ಕಚೇರಿ ಇದೆ.
 ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು ಎಂಬ ಸರ್ಕಾರದ ಒತ್ತಡದ ಕಾರಣ ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶದಲ್ಲಿ ವಹಿವಾಟು ನಡೆಸುತ್ತವೆ. ಇದಕ್ಕಾಗಿಯೇ ಅವುಗಳು 2 ಮತ್ತು 3ನೇ ಹಂತದ ನಗರಗಳಿವೆ ತೆರಳುತ್ತವೆ.
 ದೇಶದ ಶೇ.40ಕ್ಕೂ ಹೆಚ್ಚು ಮಂದಿಗೆ ಬ್ಯಾಂಕ್ ಖಾತೆಯೇ ಇಲ್ಲ. ಅವರು ಇರುವ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳು ಇಲ್ಲದಿರುವುದರಿಂದ ಅವರಿಗೆ ಈ ಸೌಲಭ್ಯವಿಲ್ಲ. ಒಂದು ವೇಳೆ ಅಂಚೆ ಬ್ಯಾಂಕ್ ಕಾರ್ಯರೂಪಕ್ಕೆ ಬಂದರೆ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಎಂಬ ವಿಚಾರ ನನಸಾಗುವ ಸಾಧ್ಯತೆ ಇದೆ.
 ಹಳ್ಳಿಗಳಲ್ಲಿ ಪೋಸ್ಟ್ ಮಾಸ್ಟರ್‌ಗಳೇ ಉನ್ನತ ಅಧಿಕಾರಿಗಳು. ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಇದೆ. ಅವರಿಗೆ ಸಾಮಾನ್ಯವಾಗಿ ತಮ್ಮ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬರ ಮುಖ ಪರಿಚಯವಿದ್ದು, ಬ್ಯಾಂಕಿನ ಹಣಕಾಸು ಸೇರ್ಪಡೆಯಂಥ ಕಾರ್ಯಕ್ರಮಕ್ಕೆ ಹೇಳಿ ಮಾಡಿಸಿದಂಥ ಅವಕಾಶವಿದೆ.
 ಟೆಲಿಗ್ರಾಂ ಸೇವೆ ಕೊನೆಗೊಂಡಿರುವುದರಿಂದ ಅದರಿಂದ ಲಭ್ಯವಾಗುವ ಹೆಚ್ಚುವರಿ ಸಿಬ್ಬಂದಿಯನ್ನು ಬ್ಯಾಂಕಿನ ಕೆಲಸಕ್ಕೆ ನಿಯೋಜಿಸಬಹುದು.
ಈಗಾಗಲೇ ಉಳಿತಾಯ, ಚಾಲ್ತಿ ಖಾತೆ, ರಿಕರಿಂಗ್ ಖಾತೆಗಳನ್ನು ಅಂಚೆ ಇಲಾಖೆ ನಿರ್ವಹಿಸುತ್ತಿದೆ. ವಿಮೆ ಮತ್ತು ಸೇವಿಂಗ್ಸ್ ಸರ್ಟಿಫಿಕೇಟ್‌ಗಳನ್ನೂ ನಿರ್ವಹಿಸುತ್ತಿದೆ. ಚಿನ್ನದ ನಾಣ್ಯಗಳನ್ನು ಮಾರುತ್ತಿದೆ.
ಬ್ಯಾಂಕ್‌ನ ಅನಾನುಕೂಲತೆಗಳು
 ಸಾಲ ವಿಲೇವಾರಿ, ಸಾಲ ವಸೂಲಿ, ಸುಸ್ತಿ ಸಾಲ ನಿರ್ವಹಣೆ (ಇದಕ್ಕೆ ಇನ್ನು ಸ್ವಲ್ಪ ಕಾಲ ಬೇಕು) ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರದಲ್ಲಿ ಸುಸೂತ್ರ ಕಾರ್ಯ ನಿರ್ವಹಣೆ ಅಡಚಣೆ ಆಗಬಹುದು.
 ಇಲಾಖೆ ಸಿಬ್ಬಂದಿಗೆ ಇಂಥ ಕೆಲಸಗಳಲ್ಲಿ ಅನುಭವ ಇಲ್ಲದೇ ಇರುವುದು ಸಮಸ್ಯೆ ತಂದೊಡ್ಡಬಹುದು.
ಪರಿಹಾರವೇನು?
 ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿ ನಿವೃತ್ತಿಯಾದ ಅಥವಾ ಸ್ವಯಂ ನಿವೃತ್ತಿ ಪಡೆದವರನ್ನು ಅಂಚೆ ಬ್ಯಾಂಕ್‌ಗೆ ನಿಯೋಜಿಸಬಹುದು.
 ಬ್ಯಾಂಕ್ ಅಧಿಕಾರಿಗಳ ಅನುಭವದ ಪ್ರಯೋಜನವನ್ನು ಪರಿಣಾಮಕಾರಿಯಾಗಿ ಬಳಸಲು ಅವಕಾಶ ಉಂಟು.
ಸಿಬ್ಬಂದಿಗಳ ಕಥೆ
  ಬ್ಯಾಂಕ್ ಆಗಿ ಪರಿವರ್ತನೆಯಾದ ನಂತರ ಅಂಚೆ ಇಲಾಖೆಯ ನೌಕರರಿಗೆ, ಬ್ಯಾಂಕ್ ನೌಕರರಿಗೆ ಸಿಗುವ ಗೌರವ ಸಮಾಜದಲ್ಲಿ ಸಿಗುತ್ತದೆ. ಸಂಬಳ- ಸೌಕರ್ಯಗಳೂ ಬ್ಯಾಂಕ್ ನೌಕರರ ಎತ್ತರಕ್ಕೆ ಏರುವ ಸಾಧ್ಯತೆ ಇದೆ.
 ಹೊಣೆಗಾರಿಕೆ ಮತ್ತು ನಿತ್ಯದ ಕೆಲಸದಲ್ಲಿ ರಿಸ್ಕ್ ಕೂಡಾ ಹೆಚ್ಚಾಗುತ್ತದೆ. ಅವರು ಬ್ಯಾಂಕಿನ ನೌಕರರಂತೆ ಅಖಿಲ ಭಾರತ ವರ್ಗಾವರ್ಗಿಗೆ ಸಿದ್ಧರಾಗಿರಬೇಕು.
  ಆರಂಭದಲ್ಲೇ ಬ್ಯಾಂಕ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಒಮ್ಮೆಲೇ ಆರಂಭಿಸಿದರೆ ಮುಗ್ಗರಿಸುವ ಸಾಧ್ಯತೆ ಹೆಚ್ಚು.
  ಅಂಚೆ ಬ್ಯಾಂಕ್ ಇಲಾಖೆ ಆರಂಭಕ್ಕೆ ಹಣಕಾಸು ಇಲಾಖೆಯಲ್ಲೇ ವಿರೋಧವಿದೆ. ಬ್ಯಾಂಕಿಂಗ್ ಕ್ಷೇತ್ರದ ಅನುಭವ ಅಂಚೆ ಇಲಾಖೆ ಸಿಬ್ಬಂದಿಗೆ ಇಲ್ಲ ಎನ್ನುವುದು ಅವರ ವಾದ. ಸಾಲ ವಿಲೇವಾರಿ ಮತ್ತು ನಿರ್ವಹಣೆಯ ವಿಚಾರದಲ್ಲಿ ಅವುಗಳು ಇನ್ನೂ ಅನುಭವ ಪಡೆದಿಲ್ಲ. ಏಕೆಂದರೆ ಬ್ಯಾಂಕ್ ಕೇವಲ ಠೇವಣಿ ಮೇಲೆ ನಡೆಯುವುದಿಲ್ಲ. ಸಾಲ ವಿಲೇವಾರಿಯಾಗಿ ಆದಾಯ ಗಳಿಸಿದಾಗಲೇ ಬ್ಯಾಂಕ್ ನಡೆಯುವುದು ಎನ್ನುವ ವಾದ ಸ್ವಲ್ಪ ತೂಕ ಪಡೆದಿದೆ.
ದೇಶದ ಒಟ್ಟು ಅಂಚೆ ಕಚೇರಿಗಳು 1,54,866
ಗ್ರಾಮೀಣ ಪ್ರದೇಶದಲ್ಲಿರುವುದು
1,39,040
ನಗರ ಪ್ರದೇಶದಲ್ಲಿ
15,826
ಒಟ್ಟು ಉದ್ಯೋಗಿಗಳು
4,66,903
ಅಂಚೆ ವಲಯಗಳು
22


-ರಮಾನಂದ ಶರ್ಮಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement