ರಿಸರ್ವ್ ಬ್ಯಾಂಕಿನ ರೀತಿಯಂತೆ, ಇನ್‌ಫ್ಲೇಷನ್ ದರಕ್ಕೂ ಬ್ಯಾಂಕ್ ಬಡ್ಡಿಯ ದರಕ್ಕೂ ಸಂಬಂಧವಿದೆ. ಆದರೂ ಈಗ ಠೇವಣಿಗಳ ನಿಜಮೌಲ್ಯವನ್ನು ಇನ್‌ಫ್ಲೇಷನ್ ಕುಗ್ಗಿಸುತ್ತಿರುವುದು ನಿಜ. ಈಗ ಗ್ರಾಹಕರಿಗೆ ಸಿಗುತ್ತಿರುವ ಫಲ ಕಡಿಮೆ.
ಇದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಇನ್‌ಫ್ಲೇಷನ್ ಬಾಂಡ್‌ಗಳನ್ನು ಮಾರಲಿದೆ. ಮೊದಲ ಹಂತದಲ್ಲಿ ಜೂನ್‌ನಲ್ಲಿ 2000 ಕೋಟಿ ರುಪಾಯಿಗಳ ಬಾಂಡ್‌ಗಳ ಮಾರಾಟ ಆಗಬೇಕು. 'ಕೂಪನ್ ರೇಟ್'- ಇನ್‌ಫ್ಲೇಷನ್ ಪರಿಹಾರದ ದರಗಳು ತೃಪ್ತಿಕರವಾಗಿದ್ದರೆ, ನಿಶ್ಚಿತ ಅವಧಿಯ ಆದಾಯ ಅಗತ್ಯವಾಗಿರುವ ಜನರಿಗೆ ಇದು ವರದಾನವಾಗುವುದು.
ಭದ್ರತೆ ಖಾತ್ರಿ
ಪ್ರತಿಸಲಕ್ಕೂ ಇನ್‌ಫ್ಲೇಷನ್ ದರಕ್ಕೂ ನೇರ ಸಂಬಂಧ. ಸಾಮಾನ್ಯರಿಗೆ ಹೇಳಿ ಮಾಡಿಸಿದಂತಹ ಯೋಜನೆ. ಕನಿಷ್ಠ ಠೇವಣಿ 10,000 ರು. ಸದ್ಯದಲ್ಲಿ ಬಡ್ಡಿಯ ದರಗಳು ಹೆಚ್ಚುವಂತಿಲ್ಲ. ಆದ್ದರಿಂದ ಠೇವಣಿಗಳನ್ನು ಈಗಿನ ದರಗಳಲ್ಲೇ ಮುಂದುವರಿಸಲು ಇದೇ ಸಕಾಲ.
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ಸೇಟ್ಟ್ ಬ್ಯಾಂಕ್, ದೇಶದ ಅತಿ ದೊಡ್ಡ ಬ್ಯಾಂಕ್. ಅದಕ್ಕೆ ಸರ್ಕಾರದ ಖಾತ್ರಿಯ ಅನುಕೂಲವೂ ಇದೆ. ಸಾಲ ಕೊಡುವುದರಲ್ಲಿ ಸ್ಟೇಟ್ ಬ್ಯಾಂಕ್ ಎತ್ತಿದ ಕೈ. ಈಗ ತಾನೇ ಪ್ರಕಟವಾದ ಬ್ಯಾಂಕಿನ ಕೊನೆಯ ತ್ರೈಮಾಸಿಕ ವರದಿ (ಅದನ್ನೇ ವಾರ್ಷಿಕ ವರದಿಗೆ ಸೇರಿಸಬಹುದು) ಹೇಳಿಕೊಳ್ಳುವಂತಹ ಉತ್ಸಾಹವನ್ನೇನೂ ಮೂಡಿಸಿಲ್ಲ.
ಅದಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ನೀಡುವ ದಿಢೀರ್ ಸಿದ್ಧವಾದ ಉತ್ತರ: ಅನುಮಾನಾಸ್ಪದವಾದ ಸಾಲಗಳ ಬಾಬಿಗೆ ಹೆಚ್ಚು ಹಣವನ್ನು ಒದಗಿಸಬೇಕಾಗಿ ಬಂದಿತ್ತು. ಅದರ ಪರಿಣಾಮವಾಗಿ ನಿವ್ವಳ ಲಾಭಾಂಶ ಕಡಿಮೆ.
ಇದು ಈಚಿನ ದಿನಗಳಲ್ಲಿ ಎಲ್ಲ ಸರ್ಕಾರಿ ಬ್ಯಾಂಕ್‌ಗಳೂ ಹಾಡುವ ಹಾಡು. ಅದರ ನಿಜವಾದ ಅರ್ಥವೇನು? ಅನರ್ಹರಿಗೆ, ಅಪಾತ್ರರಿಗೆ ಸಾಲ ಕೊಡುವುದು ಹೆಚ್ಚಾಗಿದೆ ಎಂದೇ ಅಲ್ಲವೇ.
ವಾಸ್ತವದಲ್ಲಿ ಇದು ಆಡಳಿತದ ವೈಫಲ್ಯ.
ನಿಜ. ಸರ್ಕಾರಿ ಬ್ಯಾಂಕುಗಳು, ಸರ್ಕಾರದ ನೀತಿಯನ್ನು ಜಾರಿಗೆ ತರುವುದರಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಹಾಗೆಂದ ಮಾತ್ರಕ್ಕೇ ಬೇರೆ ಯಾವ ಪರಿಗಣನೆಯೂ ಇಲ್ಲದೇ ಸರ್ಕಾರದ ಘೋಷವಾಕ್ಯವನ್ನಷ್ಟೇ ನಂಬಿಕೊಂಡು ಸಾಲವನ್ನು ದಾನವೆಂದು ಪರಿಗಣಸಬೇಕಾಗಿಲ್ಲ ಅಲ್ಲವೇ?
ಸಾಲಮೇಳಗಳಿಂದಲೂ ಸರ್ಕಾರಿ ಬ್ಯಾಂಕ್‌ಗಳು ಪಾಠ ಕಲಿಯದೇ ಹೋದರೆ ಹೇಗೆ?
(ಇಲ್ಲಿ ರೈತರ ಸಾಲದ ಮನ್ನದ ಪ್ರಶ್ನೆ ಇಲ್ಲ. ಅದನ್ನು ಸರ್ಕಾರ ವಹಿಸಿಕೊಳ್ಳುತ್ತಿದೆ).
ಮಂಡ್ಯ ಸಕ್ಕರೆ ಕಾರ್ಖಾನೆ
ಕೃಷ್ಣರಾಜ ಸಾಗರದ ನೀರಿನಿಂದ ನೀರಾವರಿ. ಮಂಡ್ಯದಲ್ಲಿ ಸರ್ಕಾರವೇ ಸ್ಥಾಪಿಸಿದ ಸಕ್ಕರೆ ಕಾರ್ಖಾನೆಗಳೇ ಮಂಡ್ಯ ಜಿಲ್ಲೆಯ ಸಂಪತ್ತಿಗೆ ಕಾರಣ. ಈಚೆಗೆ ಮಂಡ್ಯ ಸಕ್ಕರೆ ಕಾರ್ಖಾನೆ, ಪಾಂಡವಪುರದ ಕಾರ್ಖಾನೆಗಳ ಸ್ಥಿತಿ ತೃಪ್ತಿಕರವಾಗಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವುದು ಈಗಲೇ ಕಷ್ಟ. ಮುಂದೆ ಇನ್ನೂ ಕಷ್ಟವಾಗಬಹುದು.
ಕೊನೆ ಮಾತು: ಆಡಿಟರ್ ಜನರಲ್‌ರ ಹುದ್ದೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅದು ಅಪಾಯಕಾರಿ. ಇಂತಹ ಹುದ್ದೆಗಳ ನೇಮಕದ ವಿಚಾರದಲ್ಲಿ ಪ್ರತಿಪಕ್ಷಗಳ ಜತೆ ಮಾತುಕತೆ ಕಡ್ಡಾಯವಾಗಬಾರದೇಕೆ?
- ಸತ್ಯ