ಸಿಎ ಖಾತೆ ಸಂಬಂಧಿ ಕಾರ್ಯಾಚರಣೆಯಾದರೆ, ಸಿಐಎಂಎ ಖಾತೆ ನಿರ್ವಹಣೆಯ ಬಗ್ಗೆ ಹೇಳಿಕೊಡುತ್ತದೆ. 2012ರಲ್ಲಿ ಭಾರತದಲ್ಲಿ ಸಿಐಎಂಎ ಹೊಸ ಸದಸ್ಯರ ಸಂಖ್ಯೆ ಶೇ.40 ಹೆಚ್ಚಿದೆ.
ವೃತ್ತಿಪರ ಕೋರ್ಸ್‌ಗಳಲ್ಲಿ ಚಾರ್ಟೆಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ ಇವೆಲ್ಲ ಗೊತ್ತು. ಇವು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟ, ಶಾಸನಬದ್ಧ ಸಂಸ್ಥೆಗಳು ನಡೆಸುವ ಕೋರ್ಸ್‌ಗಳು. ಆದರೆ ಇಂಗ್ಲೆಂಡ್ ಮೂಲದ ಸಿಐಎಂಎ ಸಂಸ್ಥೆಯ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮುಂಬೈಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಪ್ರತಿಷ್ಠಿತ ಚಾರ್ಟರ್ಡ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆನ್ಸ್ (ಸಿಐಎಂಎ) ಅಧ್ಯಕ್ಷ ಗುಲ್ಜಾರಿ ಬಬ್ಬೇರ್ ಈ ಕುರಿತು ವಿವರವಾದ ಮಾಹಿತಿ ಒದಗಿಸಿದ್ದಾರೆ.
ಗುಲ್ಜಾರಿ ಸಿಐಎಂಎ ಅಧ್ಯಕ್ಷರಾಗುವುದಕ್ಕಿಂತ ಮುಂಚೆ ಸಮಿತಿ ಸದಸ್ಯರಾಗಿದ್ದರು. ಸಂಸ್ಥೆಯ ರಿಜಿಸ್ಟರ್ಡ್ ಹಾಗೂ ಪ್ರಾಕ್ಟಿಸ್ ಸದಸ್ಯರ ಪೈಕಿ ಅವರೂ ಒಬ್ಬರು. ವೆಸ್ಟ್ ಲಂಡನ್‌ನ ಹಾರೋ ನಗರದಲ್ಲಿ ತಮ್ಮದೇ ಆದ ಅಕೌಂಟೆನ್ಸಿ ಮತ್ತು ಟ್ಯಾಕ್ಸೆಷನ್ ಕಂಪನಿ ಹೊಂದಿದ್ದಾರೆ. ಇಷ್ಟೇ ಅಲ್ಲದೆ, ಮಾರ್ಕೆಟಿಂಗ್, ವೃತ್ತಿ ಗುಣಮಟ್ಟ, ತಾಂತ್ರಿಕ ಸಮಿತಿಗಳಲ್ಲೂ ಕೆಲಸ ಮಾಡಿದ್ದಾರೆ.
ಸಿಐಎಂಎ ಪ್ರಾರಂಭವಾದದ್ದು 1919ರಲ್ಲಿ. ಇಂಗ್ಲೆಂಡ್ ಮೂಲದ ಈ ಸಂಸ್ಥೆ ಪ್ರಸ್ತುತ ಮ್ಯಾನೇಜ್‌ಮೆಂಟ್ ಅಕೌಂಟ್ಸ್‌ಗೆ ಸಂಬಂಧಿಸಿದಂತೆ 173 ದೇಶದ 2,03,000 ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದೆ. ಸಿಐಎಂಎ ಉದ್ಯಮಿಗಳು ಹಾಗೂ ಪ್ರಾಯೋಜಕರ ಜತೆ ಸದಾ ಸಂಪರ್ಕದಲ್ಲಿರುತ್ತದೆ.
'ಜಾಗತಿಕ ಉದ್ಯಮಿಗಳ ಅವಶ್ಯಕತೆ ಪೂರೈಸಲು ನಾವು ಸದಾ ಅಪ್‌ಡೇಟ್ ಆಗುತ್ತಿರುತ್ತೇವೆ. ಉತ್ತಮ ವೃತ್ತಿಪರ ಮಟ್ಟ ಹಾಗೂ ಅತ್ಯುನ್ನತ ಸಿದ್ಧಾಂತಗಳನ್ನು ಎತ್ತಿ ಹಿಡಿಯಲು ಸಿಐಎಂಎ ಬದ್ಧವಾಗಿದೆ' ಎನ್ನುತ್ತಾರೆ ಗುಲ್ಜಾರಿ.
ಸಿಐಎಂಎ ಕೋರ್ಸ್ ಸಿಎ (ಚಾರ್ಟರ್ಡ್ ಅಕೌಂಟೆನ್ಸಿ), ಸಿಎಫ್‌ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಗಿಂತ ಹೇಗೆ ಭಿನ್ನ?
ಸಿಐಎಂಎ ಖಾತೆ ನಿರ್ವಹಣೆಯ ಬಗ್ಗೆ ಹೇಳಿಕೊಟ್ಟರೆ ಸಿಎ ಖಾತೆ ಸಂಬಂಧಿ ಕಾರ್ಯಾಚರಣೆ. ಎರಡೂ ಒಳ್ಳೆಯದೆ. ಚಾರ್ಟೆಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ ಉಪಯೋಗಿಸುವ ಸಾಧನಗಳು ಉದ್ಯಮದ ಭವಿಷ್ಯಕ್ಕೆ ರಕ್ಷಣೆ ನೀಡುತ್ತದೆ. ಅವರು ವಿವಿಧ ಬಗೆಯ ಕೌಶಲಗಳನ್ನು ಹೊಂದಿರುವುದರಿಂದ ಉದ್ಯಮದ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಪಾತ್ರ ನಂಬಿಕೆಗೆ ಅರ್ಹ. ಸಂಸ್ಥೆಯಲ್ಲಿ ಅವರ ಕಾರ್ಯಕ್ಷೇತ್ರ ಉದ್ಯಮದ ಹೃದಯ ಭಾಗದಲ್ಲಿರುತ್ತದೆ. ಪ್ರಾಜೆಕ್ಟ್‌ನ ಆರ್ಥಿಕ ವಿವರ ಹಾಗೂ ಸಂಸ್ಥೆಯ ನಿರ್ಧಾರಗಳಿಂದಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ಮ್ಯಾನೇಜರ್‌ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ.
ಸಿಐಎಂಎ ಕೋರ್ಸ್‌ಗಳನ್ನು ಸರ್ಕಾರ ಮಾನ್ಯ ಮಾಡಿದೆಯೇ? ಬೆಂಗಳೂರಿನಲ್ಲಿ ನಿಮ್ಮ ಶಾಖೆ ಇದೆಯೆ?
ಸಿಐಎಂಎ ಸದಸ್ಯರು ಸಂಸ್ಥೆಯ ನಿರಂತರ ಪ್ರಗತಿಗೆ ದುಡಿಯುತ್ತಿರುತ್ತಾರೆ. ಈ ಕೆಲಸಗಳು ಸರ್ಕಾರದ ಕಾನೂನುಗಳ ಭಾಗವಾಗಿರುವುದಿಲ್ಲ. ಮುಂಬೈನಲ್ಲಿ ನಮ್ಮ ಲೈಸೆನ್ಸ್ ಕಚೇರಿ ಇದೆ. ಬೆಂಗಳೂರು ಹಾಗೂ ಭಾರತದ ಇತರ ನಗರಗಳಲ್ಲಿ ನಮ್ಮ ಟ್ಯೂಶನ್, ಯೂನಿವರ್ಸಿಟಿ ಹಾಗೂ ಕಾರ್ಪೋರೇಟ್ ಸಹಭಾಗಿಗಳಿದ್ದಾರೆ.
ಕೋರ್ಸ್ ಸ್ವರೂಪ ಹೇಗಿರುತ್ತದೆ?
ಸಿಐಎಂಎ ಕೋರ್ಸ್‌ಗಳು ನಾಲ್ಕು ಸ್ತರಗಳನ್ನು ಹೊಂದಿದೆ. ಕಾರ್ಯಾಚರಣೆ, ನಿರ್ವಹಣೆ, ಕೌಶಲ್ಯ ಮತ್ತು ವೃತ್ತಿಪರ ಧುರೀಣತೆ. ಇವುಗಳೊಂದಿಗೆ ಉದ್ಯಮ, ಕಾರ್ಯ ನಿರ್ವಹಣೆ ಮತ್ತು ಹಣಕಾಸಿಗೆ ಸಂಬಂಧಿಸಿದ ನೈಪುಣ್ಯತೆ ಕಲಿಸಲಾಗುತ್ತದೆ.
ಸಿಐಎಂಎ ಅಧ್ಯಕ್ಷರಾಗಿ ನಿಮ್ಮ ದೃಷ್ಟಿಕೋನವೇನು? ಮುಂದಿನ ಗುರಿ?
ಈ ವರ್ಷದ ಜೂನ್‌ನಲ್ಲಿ ಅಧ್ಯಕ್ಷ ಸ್ಥಾನದಿಂದ ನಿವೃತ್ತನಾಗಲಿದ್ದೇನೆ. ಆದರೆ ನನ್ನ ದೃಷ್ಟಿಕೋನಗಳು ಹಾಗೂ ಸಲಹೆಗಳು ಜನರಿಗೆ ಉದ್ಯಮದಲ್ಲಿ ಗೆಲ್ಲಲು ಸಹಾಯಕವಾಗಲಿವೆ. ಸಿಐಎಂಎ ತನ್ನನ್ನು ಜಾಗತಿಕವಾಗಿ ವಿಸ್ತರಿಸಿಕೊಳ್ಳುವುದನ್ನು ಮುಂದುವರೆಸಿದಾಗ ನಮ್ಮ ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿಯನ್ನೂ ಹಾಗು ಉದ್ಯಮದ ಬದಲಾವಣೆಗಳ ಮುಂಚೂಣಿಯಲ್ಲಿರುವ ಭರವಸೆಯನ್ನೂ ಕೊಡಬಹುದು.
ಭಾರತದ ವಿದ್ಯಾರ್ಥಿಗಳಿಗಾಗಿ ಸಿಐಎಂಎ ಯಾವ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ?
ಕಂಪನಿಗಳು ನಿರಂತರವಾಗಿ ಪ್ರತಿಭಾವಂತರ ಹುಡುಕಾಟದಲ್ಲಿರುತ್ತದೆ. ಭಾರತವೂ ಸೇರಿ 25 ದೇಶಗಳಲ್ಲಿ ಸಿಐಎಂಎ ಜಾಗತಿಕ ಪ್ರಕರಣ ಅಧ್ಯಯನ ಸ್ಪರ್ಧೆ ನಡೆಸಿತ್ತು. ಇದು ವ್ಯವಹಾರ ತಂತ್ರಗಾರಿಕೆ, ನಿರ್ಧಾರ ಕೈಗೊಳ್ಳುವುದು ಹಾಗೂ ಅದನ್ನು ಪ್ರಸ್ತುತ ಪಡಿಸುವಲ್ಲಿ ವಿದ್ಯಾರ್ಥಿಗಳಿಗಿರುವ ಪ್ರತಿಭೆಗಳನ್ನು ಗುರುತಿಸಲು ಈ ಸ್ಪರ್ಧೆ ಸಹಕಾರಿ. ಜಾಗತಿಕ ಕಾರ್ಪೋರೇಟ್ ಪ್ರಪಂಚದಲ್ಲಿ ಕೆಲಸ ಮಾಡುವ ಅನುಭವವನ್ನು ಸಿಐಎಂಎ ವಿದ್ಯಾರ್ಥಿಗಳಿಗೆ ಮುಂಚೆಯೇ ನೀಡುತ್ತದೆ. 2013ರಲ್ಲಿ ಭಾರತದಲ್ಲಿ ಭಾಗವಹಿಸಲು 450 ತಂಡಗಳು ನೋಂದಣಿ ಮಾಡಿಕೊಂಡಿವೆ.
- ವೃಷಾಂಕ್ ಭಟ್, ನಿವಣೆ