ಕ.ಪ್ರ. ವಾರ್ತೆ ಬೆಂಗಳೂರು ಮೇ 2-
ಸಿಡಿಕೇಟ್ ಬ್ಯಾಂಕ್‌ನ 2012- 13ನೇ ಆರ್ಥಿಕ ವರ್ಷದ ವರದಿ ಪ್ರಕಟವಾಗಿದ್ದು, ಲಾಭ 2004 ಕೋಟಿಗೆ ಏರಿಕೆಯಾಗಿದೆ.
ಬ್ಯಾಂಕಿನ ಲಾಭದಲ್ಲಿ ಶೇ.52.63ರ ಭಾರಿ ಏರಿಕೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಇದು 1313 ಕೋಟಿಯಷ್ಟಾಗಿತ್ತು. ಬ್ಯಾಂಕ್‌ನ ಒಟ್ಟು ವಹಿವಾಟು ಕೂಡ ಶೇ.18.06ರ ವೃದ್ಧಿಯೊಂದಿಗೆ 3.34 ಲಕ್ಷ ಕೋಟಿಗೆ ಏರಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಎಂ.ಜಿ. ಸಾಂಘ್ವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2012- 13ನೇ ಆರ್ಥಿಕ ವರ್ಷದ ಅಂತಿಮ ತ್ರೈಮಾಸಿಕದಲ್ಲಿ ಶೇ.91.59ರಷ್ಟು ಲಾಭ ವೃದ್ಧಿಯಾಗುವ ಮೂಲಕ 592 ಕೋಟಿಯಾಗಿದೆ. ಇದಲ್ಲದೆ, ಬಡ್ಡಿ ಮೇಲಿನ ಆದಾಯದಲ್ಲೂ ಶೇ.6.21ರಷ್ಟು ವೃದ್ಧಿಯಾಗಿ 4125 ಕೋಟಿಯಾಗಿದೆ. ಷೇರುದಾರರಿಗೆ ನೀಡುವ ಲಾಭಾಂಶದಲ್ಲಿಯೂ ಶೇ.38ರಿಂದ ಶೇ.67ಕ್ಕೆ ಏರಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್‌ನ ಧನಾತ್ಮಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಶಾಖೆಯನ್ನು 2933ರಿಂದ 3200ಕ್ಕೆ ಏರಿಸಲು ತೀರ್ಮಾನಿಸಲಾಗಿದೆ. ಬ್ಯಾಂಕ್‌ನ ಒಟ್ಟು ವಹಿವಾಟನ್ನು 4.19 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಇದಲ್ಲದೇ ಈಶಾನ್ಯ ರಾಜ್ಯಗಳ ಶಾಖೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್‌ನಲ್ಲಿನ ಠೇವಣಿಯು 1.57 ಲಕ್ಷ ಕೋಟಿಯಿಂದ 1.85 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮುಂಗಡ ಹಣದ ಪ್ರಮಾಣವು 1.25 ಲಕ್ಷ ಕೋಟಿಯಿಂದ 1.49 ಲಕ್ಷ ಕೋಟಿಗೆ ವೃದ್ಧಿಯಾಗಿದೆ. ಇದಲ್ಲದೆ, ಷೇರಿನ ಮುಖಬೆಲೆ 150.13ರಿಂದ 175.12ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪ್ರತಿ ಷೇರಿನ ಗಳಿಕೆಯು 33.30ಕ್ಕೆ ಏರಿದೆ ಎಂದು ಸಾಂಘ್ವಿ ಹೇಳಿದರು.
ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಸೂಚನೆಯಂತೆ ಮಹಾನಗರಗಳ ಬ್ಯಾಂಕ್ ಶಾಖೆಗಳನ್ನು ಇನ್ನಷ್ಟು ಉನ್ನತೀಕರಿಸಲು ಚಿಂತನೆ ನಡೆದಿದೆ. ಮೆಟ್ರೋ ನಗರಗಳಲ್ಲಿ ಇ- ಲಾಂಜ್ ಶಾಖೆಗಳನ್ನು ತೆರೆಯಲಾಗುವುದು. ಈಗಾಗಲೇ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ರೀತಿಯ ಶಾಖೆ ಕಾರ್ಯನಿರ್ವಹಿಸುತ್ತಿದ್ದು, ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.