ಹೂಡಿಕೆಯಲ್ಲಿ ಯಾವುದು ಉತ್ತಮ?
ಈ ಪ್ರಶ್ನೆಯನ್ನು ಷೇರುಪೇಟೆಯಲ್ಲೇ ಹೂಡಿಕೆ ಮಾಡುತ್ತಾ ಬಂದವನಲ್ಲಿ ಕೇಳಿದರೆ, ಷೇರುಗಳಲ್ಲಿ ಹಣ ಹೂಡುವುದೇ ಉತ್ತಮ ಎನ್ನುತ್ತಾನೆ. ಅದೇ ಸಂಪ್ರದಾಯವಾದಿ ಹೂಡಿಕೆದಾರನಲ್ಲಿ ಕೇಳಿದರೆ, ಸಾಲ ಪತ್ರ ಹಾಗೂ ನಿಶ್ಚಿತ ಠೇವಣಿಗಳಲ್ಲಿ ಹೂಡಿದರೆ ರಿಸ್ಕ್ ಇಲ್ಲ. ಹಾಗಾಗಿ ಅದೇ ಸರಿಯಾದ ಮಾರ್ಗ ಎನ್ನುತ್ತಾನೆ.
ಈ ಎರಡೂ ವಾದಗಳು ಸರಿ. ಆದರೆ ನಿಜ ಹೇಳಬೇಕೆಂದರೆ, ದೀರ್ಘಾವಧಿಯಲ್ಲಿ ಈ ರೀತಿ ಒಂದೇ ತೆರನಾದ ಹೂಡಿಕೆಗೆ ಅಂಟಿಕೊಂಡಿರುವುದು ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ದೀರ್ಘಾವಧಿ ಬಂಡವಾಳವನ್ನು ಗಣನೆಗೆ ತೆಗೆದುಕೊಂಡರೆ ಷೇರುಗಳಲ್ಲಿ ಹೂಡಿಕೆ ಬೆಸ್ಟ್. ಆದರೆ, ಷೇರು ಮತ್ತು ಸಾಲಪತ್ರಗಳ ನಡುವೆ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಉತ್ತಮ. ಏಕೆಂದರೆ ಷೇರುಗಳ ಹೂಡಿಕೆಯು ಯಾವತ್ತೂ ಅತ್ಯಧಿಕ ರಿಟರ್ನ್ಸ್ ತಂದುಕೊಡುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ.
ಕುಸಿತಕ್ಕೆ ಬ್ರೇಕ್
ಕಳೆದ 10 ಮತ್ತು 20 ವರ್ಷಗಳಲ್ಲಿ, ಸೆನ್ಸೆಕ್ಸ್‌ನ ಸಂಯುಕ್ತ ವಾರ್ಷಿಕ ಪ್ರಗತಿ ದರ (ಸಿಎಜಿಆರ್) ಕ್ರಮವಾಗಿ ಶೇ.19 ಮತ್ತು ಶೇ.11. ಅದೇ ರೀತಿ ಕಳೆದ 5 ವರ್ಷಗಳಲ್ಲಿ ಸಿಎಜಿಆರ್ ಶೇ. -0.86. ಈ 5 ವರ್ಷಗಳಲ್ಲಿ ಮಾತ್ರ ಷೇರುಪೇಟೆ ಇಷ್ಟೊಂದು ಕಳಪೆ ಸಾಧನೆ ಮಾಡಿದ್ದಲ್ಲ. ಏಕೆಂದರೆ, 1998 ಮತ್ತು 2002ರ ನಡುವೆ ಸೆನ್ಸೆಕ್ಸ್‌ನ ಸಿಎಜಿಆರ್ ಶೇ. -1.6 ಆಗಿತ್ತು. ದೀರ್ಘಾವಧಿ ಆಸ್ತಿಯೆಂದು ಕರೆಯಲ್ಪಡುವ ಷೇರುಗಳೂ ಕೆಲವೊಂದು ಅವಧಿಯಲ್ಲಿ ಋಣಾತ್ಮಕ ಫಲಿತಾಂಶ ತೋರಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಈ ಅವಧಿಯಲ್ಲಿ ನೀವು ಕೇವಲ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡಿದ್ದೀರಾದರೆ ತಲೆ ಮೇಲೆ ಕೈಹೊತ್ತು ಕೂರದೇ ಬೇರೆ ವಿಧಿಯಿಲ್ಲ ಅಲ್ಲವೇ? ಇಂಥ ಪರಿಸ್ಥಿತಿ ತಪ್ಪಿಸಬೇಕೆಂದರೆ ಹೂಡಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಅಂದರೆ, ಕೇವಲ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುವ ಬದಲು ಇತರೆ ಕ್ಷೇತ್ರಗಳಲ್ಲೂ ಹಣ ಹೂಡಬೇಕು.
ಸಮತೋಲನವಿದ್ರೆ ಚೆನ್ನ
ಷೇರುಗಳು, ಚಿನ್ನ, ನಿಶ್ಚಿತ ಠೇವಣಿ, ಸಾಲ ಪತ್ರ ಹೀಗೆ ಇದ್ದ ಹಣವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದರೆ ನಿಮಗಾದ ನಷ್ಟ ಅಂಥ ಭಾರಿ ಪರಿಣಾಮವನ್ನೇನೂ ಬೀರುವುದಿಲ್ಲ. ಅಂದರೆ ನೀವು ಆರ್ಥಿಕ ನಷ್ಟವನ್ನು ಕಡಿಮೆ ಮಾಡಿದಂತೆ. ಹೂಡಿಕೆಯಲ್ಲಿನ ವೈವಿಧ್ಯತೆಯಿಂದ ರಿಸ್ಕ್ ಕೂಡ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ನಿಮಗೆ ಲಾಸ್ ಆಗಬಾರದು ಅಷ್ಟೇ. ಹಾಗಾಗಿ ಹಣವನ್ನೆಲ್ಲ ಒಂದೇ ಕಡೆ ಸುರಿದು ನಷ್ಟ ಉಂಟಾದಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಅನುಭವ ಪಡೆಯುವುದಕ್ಕಿಂತ ಹೂಡಿಕೆಗಳನ್ನು ಬ್ಯಾಲೆನ್ಸ್ ಮಾಡಿ ಬೀಸೋ ನಷ್ಟದ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಜಾಣತನ ಅಲ್ಲವೇ?
ಯಾವ ಆಯ್ಕೆ ಉತ್ತಮ?
ನಿಮ್ಮ ದೀರ್ಘಾವಧಿ ಗುರಿ ಮತ್ತು ರಿಸ್ಕ್ ಎದುರಿಸುವ ಸಾಮರ್ಥ್ಯದ ಮೇಲೆ ಯಾವ ಆಯ್ಕೆ ಉತ್ತಮ ಎಂಬುದು ಅವಲಂಬಿಸಿರುತ್ತದೆ. ಹೆಚ್ಚು ಹಣವಿದ್ದರೆ ಚಿನ್ನ, ಷೇರುಗಳು ಹಾಗೂ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿ. ಇದಲ್ಲದಿದ್ದರೆ, ರಿಯಲ್ ಎಸ್ಟೇಟ್ ಅಥವಾ ನಿಶ್ಚಿತ ಆದಾಯ ಮ್ಯೂಚ್ಯುವಲ್ ಫಂಡ್‌ಗಳಲ್ಲೂ ಬಂಡವಾಳ ಹೂಡಬಹುದು.
ನೀವೇನು ಮಾಡಬೇಕು?
ಷೇರುಪೇಟೆ ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಅದರಲ್ಲಿ ಏರಿಳಿತಗಳು ಸಹಜ. ಅಲ್ಲಿ ಯಾವಾಗ ನಷ್ಟ ಉಂಟಾಗಬಹುದು ಎಂಬುದನ್ನು ಊಹಿಸುವುದೂ ಸಾಧ್ಯವಿಲ್ಲ. ಇಂಥ ಗೊಂದಲದಲ್ಲಿ ಬೀಳುವ ಬದಲು ಎಲ್ಲದರಲ್ಲೂ ಹಣ ಹೂಡಿಕೆ ಮಾಡಿ ನಿಟ್ಟುಸಿರು ಬಿಡಬಹುದು. ನಿಮ್ಮ ಆರ್ಥಿಕ ಉದ್ದೇಶಗಳಿಗೆ ಅನುಗುಣವಾಗಿ ಬುದ್ಧಿವಂತಿಕೆ ಉಪಯೋಗಿಸಿ ಹೂಡಿಕೆ ಮಾಡಿ. ಆರ್ಥಿಕ ಸಲಹೆಗಾರರ ಸಲಹೆ ಪಡೆದರೆ ಇನ್ನೂ ಉತ್ತಮ.
-ದಿಯಾ