ಚೀನಾ ಈಗ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ. ಭಾರತದ ನೆರೆಯ ಈ ದೈತ್ಯ ರಾಷ್ಟ್ರ, ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯ ಕಮ್ಯುನಿಸ್ಟ್ ನಿಯಂತ್ರಣ ವ್ಯವಸ್ಥೆಯಿಂದ ಸುಧಾರಣೆ ನೀತಿಯನ್ನು ಅನುಸರಿಸುವ ಮಾರ್ಗವನ್ನು ಕೊನೆಗೂ ಆರಿಸಿಕೊಂಡಿದೆ. ಪೇಟೆ ಶಕ್ತಿಯನ್ನು ಅವಲಿಂಬಿಸಲು ನಿರ್ಧರಿಸಿದೆ. ಆ ರಾಷ್ಟ್ರದ ಅತ್ಯುನ್ನತ ನೀತಿ ನಿರೂಪಣೆ ಸಮಿತಿ ತಿಂಗಳುಗಟ್ಟಲೆ ಚರ್ಚೆ ನಡೆಸಿ, ಕೊಸರಾಡಿ, ಕೊನೆಗೆ ಹಲವಾರು ಸುಧಾರಣೆ ಕ್ರಮಗಳನ್ನು ಪ್ರಕಟಿಸಿ ಜಗತ್ತನ್ನೇ ಅಚ್ಚರಿಗೊಳಿಸಿದೆ.
ಆ ಸುದ್ದಿಯೇ ಮುಂಬೈ ಪೇಟೆಯಲ್ಲಿ ಚಟುವಟಿಕೆ ಚುರುಕುಗೊಂಡು, ಮುಂಬೈ ಎಕ್ಸ್‌ಚೇಂಜ್‌ನ ಸಂತೇಲಿ ಸೂಚ್ಯಾಂಕ ಒಂದೇ ದಿನ 451 ಅಂಶಗಳಷ್ಟು ಏರಿದ್ದರ ಹಿನ್ನೆಲೆ ಏನು? ಷೇರು ಬಜಾರು ಅನೇಕ ಸಂದರ್ಭಗಳಲ್ಲಿ ಕೇವಲ ಭಾವನೆಗಳ ಆಧಾರದ ಮೇಲೇ ಪ್ರತಿಕ್ರಿಯೆಯನ್ನು ಪ್ರಕಟಿಸುವುದುಂಟು. ಷೇರುಪೇಟೆಯ ಏರಿಳಿತಕ್ಕೂ ವಾಸ್ತವ ಸ್ಥಿತಿಗೂ ಸಂಬಂಧವೇ ಇರುವುದಿಲ್ಲ. ಪ್ರಾಯಶಃ ಈಗಲೂ ಹಾಗೇ ಆಗಿರಬಹುದು. ಆದರೂ, ಚೀನಾದ ಆರ್ಥಿಕ ವ್ಯವಹಾರದ ನಿಯಮಗಳಲ್ಲಿ ಸುಧಾರಣೆ ಕಂಡುಬಂದರೆ, ಅದು ಭಾರತದ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಪೇಟೆ ಅದನ್ನು ಈಗಾಗಲೇ ಸ್ವಾಗತಿಸಿದಂತಿದೆ.
ಇಳಿಜಾರು ಯಾತ್ರೆ ಇಲ್ಲ
ಚಾಲ್ತಿ ವರ್ಷದ ಜುಲೈ - ಆಗಸ್ಟ್ - ಸೆಪ್ಟೆಂಬರ್ ತ್ರೈ ಮಾಸಿಕ ಅವಧಿಯಲ್ಲಿ ಕಾರ್ಪೊರೇಟ್‌ಗಳ ವ್ಯವಹಾರಿಕ ವರದಿಗಳನ್ನು ಗಮನಿಸಿದರೆ, ಕಳೆದ ಎರಡು ವರ್ಷಗಳಿಗಿಂತ ಈ ವರ್ಷ ಉತ್ತಮ ರೀತಿಯ ಫಲಿತಾಂಶ ಪ್ರಕಟವಾಗಿದೆ. ಆದರೂ ಭಾರಿ ಲಾಭವೇನೂ ಕಂಡುಬಂದಿಲ್ಲ. ಈ ಮಾರ್ಪಾಡಿಗೆ ಮೂಲ ಕಾರಣ ಎಂದರೆ ಸರ್ಕಾರ ಸಾರ್ವಜನಿಕ ವಲಯದಲ್ಲಿ ತನ್ನ ಖರ್ಚನ್ನು ಹೆಚ್ಚಿಸಿರುವುದು. ಅದರ ಜತೆಯಲ್ಲೇ ರುಪಾಯಿಯ ಮೌಲ್ಯ ಕಡಿಮೆಯಾಗಿರುವುದು.
ಚಾಲ್ತಿ ವರ್ಷದಲ್ಲೂ ಏಪ್ರಿಲ್ - ಜೂನ್ ಅವಧಿ ತೃಪ್ತಿಕರವಾಗಿರಲಿಲ್ಲ. ಎರಡನೆ ತ್ರೈಮಾಸಿಕ ವರದಿ ತೃಪ್ತಿಕರವಲ್ಲದಿದ್ದರೂ ಅತೃಪ್ತಿಕರವೇನೂ ಆಗಿರಲಿಲ್ಲ. ಇನ್ನುಳಿದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಏರು ಪೇರು ಕಂಡು ಬರಲಿಕ್ಕಿಲ್ಲ. ಇವೆಲ್ಲದರ ಅರ್ಥ ಒಂದೇ! ಆರ್ಥಿಕ ವ್ಯವಸ್ಥೆ ಪೂರ್ತಿ ಚೇತರಿಸಿಕೊಂಡು ಮೇಲೆ - ಮೇಲೇರದೇ ಇದ್ದರೂ ಇದುವರೆಗೆ ಕಂಡುಬಂದಿದ್ದ ಇಳಿಜಾರು ಪ್ರವೃತ್ತಿ ಸ್ಥಗಿತವಾಗುವ ಸಂಭವವಿದೆ. ಅಧಿಕ ಲಾಭ, ಕಾರ್ಪೊರೇಟ್ ವಲಯಕ್ಕೆ ಬರದೇ ಹೋದರೂ ಪರಿಸ್ಥಿತಿ ಸ್ವಲ್ಪವಾದರೂ ಸುಧಾರಿಸಲಿದೆ.
ರಿಸರ್ವ್ ಬ್ಯಾಂಕ್ ನೀತಿ
ರಿಸರ್ವ್ ಬ್ಯಾಂಕ್, ಬ್ಯಾಂಕ್‌ಗಳಿಗೆ ನೀಡಿರುವ ಸ್ಪಷ್ಟ ನಿರ್ದೇಶನದಂತೆ, ಆದಷ್ಟು ಬೇಗ ಕೆಟ್ಟ ಸಾಲಗಳ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಹಳೆಯ ಸಾಲ ಕೆಟ್ಟರೆ, ಅದನ್ನು ಪುನರಚನೆ ಮಾಡಿ (ಅಂದರೆ ಹೊಸ ಸಾಲದ ಸ್ವರೂಪಕ್ಕೆ ತಂದು) ಮತ್ತೆ ಅದು ಕೆಡುವವರೆಗೂ ಕಾಯುವುದು ಬೇಡ. ಇನ್ನು ಹಳೆಯ ಸಾಲದ ಪುನರಚನೆ ಎಂದರೆ ಆ ಸಾಲ ಕೆಟ್ಟಿದೆ ಎಂದೇ ಘೋಷಿಸಿ, ಮುಂದಿನ ಕ್ರಮ ಜರುಗಿಸಬೇಕು.
ಕೊನೆ ಮಾತು
ಮುಂಬೈನ ನಾರಿಮನ್ ಪಾರ್ಲಿಮೆಂಟ್‌ನ ಬೃಹತ್ (25 ಅಂತಸ್ತುಗಳು) ಭಾರಿ ಕಟ್ಟಡ ಎಕ್ಸ್‌ಪ್ರೆಸ್ ಟವರ್ಸ್ ಮಾರಾಟವಾಗಲಿದೆ. ಪ್ರಕಟಿತ ವರದಿಗಳಂತೆ, ಅಮೆರಿಕದ ಬ್ಲ್ಯಾಕ್‌ಸ್ಟೋನ್ ಕಂಪನಿ, ಪುಣೆಯ ರಿಯಾಲಿಟಿ ಸಂಸ್ಥೆಗಳು ಈ ಕಟ್ಟಡವನ್ನು 900 ಕೋಟಿ ರುಪಾಯಿಗಳಿಗೆ ಕೊಳ್ಳಲಿವೆ. ಮೇಲಿನ ಮಹಡಿಗಳಲ್ಲಿರುವ ಎಕ್ಸ್‌ಪ್ರೆಸ್ ಕಾರ್ಯಾಲಯ ಹಾಗೂ ಗೊಯೆಂಕಾ ಮನೆತನದ ಹೋಟೆಲ್‌ಗಳಿರುವ ಕಟ್ಟಡಗಳ ಬೆಲೆ ಸೇರಿಲ್ಲ. ಈಗಿನ ಮಾಲೀಕರು ಇಂಡಿಯನ್ ಎಕ್ಸ್‌ಪ್ರೆಸ್ - ಐಸಿಐಸಿಐ ವೆಂಚರ್ಸ್ ಲಿ.
- ಸತ್ಯ