ಒತ್ತಡದ ಜೀವನ, ಬಿಡುವಿಲ್ಲದ ಕೆಲಸಗಳಿಂದ ನಿಮಗೆ ಶಾಪಿಂಗ್ ಮಾಡಲು ಟೈಮಿಲ್ಲವೇ? ಹಾಗಾದರೆ ಕೊರಗಬೇಕಿಲ್ಲ. ಏಕೆ ಅಂತಿರಾ? ಆಧುನಿಕ ಜಗತ್ತು, ಮುಂದುವರಿದ ತಂತ್ರಜ್ಞಾನಗಳಿಂದ ಆನ್‌ಲೈನ್ ಶಾಪಿಂಗ್ ವ್ಯವಸ್ಥೆ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದ್ದು, ಬೆರಳ ತುದಿಯಲ್ಲೇ ನಿಮಗೆ ಬೇಕಾದ ಬ್ರಾಂಡ್‌ನ ವಸ್ತುಗಳನ್ನು ಕುಳಿತಲ್ಲಿಯೇ ಖರೀದಿ ಮಾಡಬಹುದು.
ಶಾಪಿಂಗೋ ಶಾಪಿಂಗು
ಬೆಂಗಳೂರಿನಂಥ ಮಹಾನಗರಗಳಲ್ಲಿ ರಜಾದಿನಗಳಲ್ಲಿ ಹೆಚ್ಚಿನ ಜನ ಶಾಪಿಂಗ್‌ನಲ್ಲಿ ಕಾಲ ಕಳೆಯುತ್ತಾರೆ. ಮತ್ತೆ ಕೆಲವರಿಗೆ ಶಾಪಿಂಗ್ ಒಂದು ಹವ್ಯಾಸವಾಗಿರುತ್ತದೆ. ಆದರೆ ಈ ಟ್ರಾಫಿಕ್ ಜಾಮ್, ಶಾಪಿಂಗ್ ಮಾಲ್‌ಗಳಲ್ಲಿ ಪಾರ್ಕಿಂಗ್ ಕಿರಿಕಿರಿ, ಖರೀದಿಸಿದ ವಸ್ತುಗಳನ್ನು ಮನೆಗೆ ತರಲು ತಾಪತ್ರಯ, ಕೆಲವೊಂದು ಬಾರಿ ಕಂಪನಿಯಿಂದ ಮೋಸ ಹೋಗುವುದು ಇವೆಲ್ಲವನ್ನು ನಿಭಾಯಿಸಲು ಹೆಚ್ಚಿನ ಜನ ಆನ್‌ಲೈನ್ ಶಾಪಿಂಗ್‌ನತ್ತ ಒಲವು ತೋರುತ್ತಿದ್ದಾರೆ.
ವಿವಿಧ ವೆಬ್‌ಸೈಟ್‌ಗಳು
ಆನ್‌ಲೈನ್ ಶಾಪಿಂಗ್ ಇಂಡಿಯಾದ ಬಳಕೆದಾರರಲ್ಲಿ ಒಂದು ಹೊಸ ಮಂತ್ರವಾಗಿ ಮಾರ್ಪಟ್ಟಿದೆ. ದಿನ ಬೆಳಗಾದರೆ ಯಾವುದೇ ಟಿ.ವಿ. ಚಾನೆಲ್ ಆನ್ ಮಾಡಿದರೂ ಇ- ವಾಣಿಜ್ಯ ಕಂಪನಿಗಳ ಜಾಹೀರಾತುಗಳು ಹರಿದಾಡುತ್ತಿರುತ್ತವೆ. ಆನ್‌ಲೈನ್ ಶಾಪಿಂಗ್ ಬಗ್ಗೆ ಅರಿವು ಹಾಗೂ ಇ- ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶ ಜಾಹೀರಾತು ಕಂಪನಿಗಳದ್ದಾಗಿದೆ.
ಗ್ರಾಹಕರನ್ನು ಸೆಳೆಯಲು ಆನ್‌ಲೈನ್ ಶಾಪಿಂಗ್‌ಗೆಂದೇ ವಿವಿಧ ಶಾಪಿಂಗ್ ವೆಬ್‌ಸೈಟ್‌ಗಳು ಹುಟ್ಟಿಕೊಂಡಿದ್ದು, ಒಂದೇ ವಸ್ತುವಿನ ಬೆಲೆ ಒಂದು ಶಾಪಿಂಗ್ ವೆಬ್‌ಸೈಟ್‌ನಿಂದ ಮತ್ತೊಂದು ವೆಬ್‌ಸೈಟ್‌ಗೆ ಭಿನ್ನವಾಗಿರುತ್ತದೆ. ಹಲವು ಆನ್‌ಲೈನ್ ಅಂಗಡಿಗಳನ್ನು ನೋಡಿ ಅತೀ ಕಡಿಮೆ ಬೆಲೆಗೆ ಸಿಗುವಲ್ಲಿ ಖರೀದಿ ಮಾಡಬಹುದು. ವಸ್ತುವಿನ ಬಗ್ಗೆ ಯಾವುದೇ ಮೋಸವಿರುವುದಿಲ್ಲ. ಹಾಗೇನಾದರೂ ಆನ್‌ಲೈನ್ ಸಾಮಗ್ರಿ ಮಾರಾಟಗಾರ ವಂಚನೆ ನಡೆಸಿದರೆ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿದೆ.
ಬುಕ್ ಮಾಡಿದ ಕೇವಲ 72 ಗಂಟೆಯೊಳಗೆ ಸುರಕ್ಷಿತವಾಗಿ ಹೋಮ್ ಡೆಲಿವರಿ ಕೊಡುತ್ತಾರೆ. ಖರೀದಿಸಿದ ವಸ್ತುವು ಹಾಳಾಗಿದ್ದರೆ ಅದನ್ನು ಹಿಂತಿರುಗಿಸಲು ಸುಲಭವಾಗಿರುವುದೂ ಇದಕ್ಕೆ ಮತ್ತೊಂದು ಕಾರಣವಾಗಿದೆ.
ಆನ್‌ಲೈನ್ ಶಾಪಿಂಗ್‌ನಿಂದ ಸಮಯ ಮತ್ತು ಅಂಗಡಿಗಳ ಅಲೆದಾಟ ತಪ್ಪುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ನಮಗೆ ಬೇಕೆಂದ ಸಾಮಗ್ರಿ ಬೆರಳ ತುದಿಯಲ್ಲೇ ಖರೀದಿಸಬಹುದು ಎನ್ನುತ್ತಾರೆ ಆನ್‌ಲೈನ್ ಗ್ರಾಹಕ ರುದ್ರಗೌಡ.
ಆನ್‌ಲೈನ್ ಶಾಪಿಂಗ್ ಅಭಿವೃದ್ಧಿಗೆ ಕಾರಣ
= ಹೈ- ಸ್ಪೀಡ್ ಇಂಟರ್‌ನೆಟ್
= ಸುಲಭ ಹಾಗೂ ಅನುಕೂಲವಾದ ಶಾಪಿಂಗ್
= ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ಸರಬರಾಜು ಮಾಡುವ ಕಂಪನಿಗಳು
= ನಂಬಲರ್ಹ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಟ್ಯಾಬ್ಲಾಡ್, ಸ್ಮಾರ್ಟ್ ಪೋನ್, ಪಿಸಿ
= ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ, ನಗರಗಳಲ್ಲೂ ಸೀಮಿತ ಅವಧಿಯಲ್ಲಿ ಸರಬರಾಜು
= ಡೆಬಿಟ್, ಕ್ರೆಡಿಟ್ ಕಾರ್ಡ್, ಕ್ಯಾಶ್ ಬೇಕಾದ ಅನುಕೂಲಕರ ರೀತಿಯಲ್ಲಿ ಪಾವತಿ
= ಹಿಂತಿರುಗಿಸಲು, ಬದಲಿಸಲು ಅನುಕೂಲ
ಹೆಚ್ಚಿನ ಬಳಕೆಯಾಗುತ್ತಿರುವುದು
= ಏರ್‌ಲೈನ್ ಟಿಕೆಟ್ಸ್, ಹೋಟೆಲ್ ಮುಂಗಡ ಬುಕಿಂಗ್, ಮೊಬೈಲ್ ಹ್ಯಾಂಡ್‌ಸೆಟ್, ಪುಸ್ತಕಗಳು, ಬ್ರಾಂಡೆಡ್ ಶೂಗಳು, ಉಡುಪುಗಳು, ಜ್ಯೂವೆಲ್ಲರಿ, ಪಿಸಿ, ಲ್ಯಾಪ್‌ಟಾಪ್
ಇ- ಟ್ರೈಲರ್ ಚಾಲೆಂಜ್
= ಮಳಿಗೆಗಳಿಗೆ ಸಮರ್ಥ ರೀತಿಯಲ್ಲಿ ಸರಬರಾಜು ಮಾಡುವುದು, ಪ್ಯಾಕೇಜ್, ಕಂಪನಿಗಳಿಂದ ತರಿಸಿಕೊಳ್ಳುವುದು ಸವಾಲಿನ ಕೆಲಸ
= ಗ್ರಾಹಕ ಹೇಳಿದ ಸ್ಥಳ ಹುಡುಕಿ ಸೀಮಿತ ಅವಧಿಯಲ್ಲಿ ಸರಬರಾಜು ಮಾಡುವುದು
= ದೂರದ ಸ್ಥಳಗಳಿಗೆ ರಿಯಾಯಿತಿ ಬೆಲೆಯ ವಸ್ತುಗಳ ಸರಬರಾಜು ನೀಡುವುದು
- ಎನ್.ಎಲ್. ಶಿವಮಾದು
shivamadhu2009@gmail.com