ಸಂಸತ್ತಿನ ಒಳಗೆ, ಹೊರಗೆ ನಡೆದಿರುವ ಉದ್ವೇಗ, ಆತಂಕಗಳಿಂದ ಕೂಡಿದ ಆರ್ಥಿಕ ಕುಸಿತದ ಚರ್ಚೆಯಲ್ಲಿ ಅನೇಕ ಪಂಡಿತರು 1991ರಲ್ಲಿ ಚಂದ್ರಶೇಖರ್ ಪ್ರಧಾನಿ ಸ್ಥಾನ ಬಿಟ್ಟ ಅನಂತರ ಇದ್ದ ಸ್ಥಿತಿಗೂ ಈಗಿನ ಕುಸಿತದ ಸ್ಥಿತಿಗೂ ತಾಳೆ ಹಾಕುತ್ತಿದ್ದಾರೆ. 1991ರ ಅನಂತರದ ದಿನಗಳಲ್ಲಿ, ಚಿನ್ನವನ್ನು ಒತ್ತೆ ಇಟ್ಟು ಸಾಲ ತಂದ ಸ್ಥಿತಿಯನ್ನು ದೇಶದ ಆಗಿನ ಸರ್ಕಾರ ನಿಭಾಯಿಸಿತು. ಆಗ ಈಗಿನಷ್ಟು ರಂಪ ರಾದ್ಧಾಂತವಾಗಲಿಲ್ಲ. ಅದು ಹೇಗೆ ಸಾಧ್ಯವಾಯಿತು? ಆಗ ಆಗಿದ್ದು ಈಗೇಕೆ ಆಗಬಾರದು? ಇಂಥ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡುವಂತೆ, ಎಕನಾಮಿಕ್ ಟೈಮ್ಸ್ ಪತ್ರಿಕೆ ನೀಡಿದ ಶೀರ್ಷಿಕೆ- 'ನರಸಿಂಹ ಇಲ್ಲದ ಸಿಂಗ್'. 1991ರಲ್ಲಿ ಪಿ.ವಿ. ನರಸಿಂಹರಾಯರು ಪ್ರಧಾನಿ. ಮನಮೋಹನ ಸಿಂಗ್ ವಿತ್ತಮಂತ್ರಿ. ಬಿಕ್ಕಟ್ಟಿಗೆ ಇವರಿಬ್ಬರಲ್ಲಿ ಯಾರೂ ಹೊಣೆಗಾರರಾಗಿರಲಿಲ್ಲ, ಬಿಕ್ಕಟ್ಟು ಇತ್ತು. ಆಗ ಪರಿಸ್ಥಿತಿಯನ್ನು ನಿಭಾಯಿಸಿದ್ದು ಹಿರಿಯ ಮುತ್ಸದ್ದಿಗಳ ಚಾಕಚಕ್ಯತೆ ಹಾಗೂ ವಿಶಾಲ ಹೃದಯವಂತಿಕೆ. ಆಗಿನ ದಿನಗಳಲ್ಲಿ ಕೆಲಸ ಮಾಡಿದ ಒಬ್ಬ ಪಂಡಿತರ ಪ್ರಕಾರ ಪ್ರಧಾನಿ, ವಿತ್ತಮಂತ್ರಿ, ವಿರೋಧ ಪಕ್ಷದ ನಾಯಕರಾದ ವಾಜಪೇಯಿ- ಅಡ್ವಾಣಿ ಅವರ ನಡುವೆ ಸಂಪರ್ಕ ಕಡಿತ ಬೀಳಲೇ ಇಲ್ಲ. ನಿತ್ಯ ಹತ್ತುಹಲವು ಸಂದೇಶಗಳ ರವಾನೆ, ಅದಕ್ಕೆ ಪ್ರಕ್ರಿಯೆ ಸಾಧ್ಯವಾಗಿತ್ತು.
ಈಗ ಆ ಸ್ಥಿತಿ ಇಲ್ಲ. ಮನಮೋಹನ ಸಿಂಗ್ ಪ್ರಧಾನಿ. ಆದರೆ ನರಸಿಂಹರಾಯರಿಲ್ಲ. ಆಳುವ ಸಂಯುಕ್ತ ಪ್ರಗತಿಪರ ಕೂಟ ಹಾಗೂ ವಿರೋಧ ಪಕ್ಷಗಳ ರಾಷ್ಟ್ರೀಯ ಜನತಾಂತ್ರಿಕ ಕೂಟಗಳು ಪರಸ್ಪರ ಶತ್ರುಗಳಂತೆಯೇ ವರ್ತಿಸುತ್ತಿವೆ. ಇಂಥ ಸನ್ನಿವೇಶಗಳಲ್ಲಿ ಬೇಕಿರುವುದು ಪ್ರಚಾರ- ಅಪಪ್ರಚಾರದಿಂದ ದೂರವಾದ ಪ್ರಾಂಜಲ ಮನಸ್ಸಿನ ವಿಚಾರ ವಿನಿಮಯ. ಅಂಥ ಒಂದು ಪ್ರಯತ್ನ ನಡೆದಿರುವುದು ಈಗಷ್ಟೇ. ಮುಂದೆ ಏನಾಗುತ್ತೋ ನೋಡಬೇಕು. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಇಳಿಮುಖವಾಗುತ್ತಿದೆ. ಆ ಪ್ರವೃತ್ತಿ ನಿಂತೇ ಇಲ್ಲ. ಈ ವ್ಯವಹಾರದಲ್ಲಿ 'ವಿಕ್ರಮ'ವನ್ನು ಮುರಿಯುವುದು ಈಗ ಮಾಮೂಲು.
ಸುಧಾರಣೆ ಸಾಧ್ಯವೇ?
ಪೇಟೆಯ ಮಾತುಗಾರರ ಆತಂಕದ ಪ್ರಶ್ನೆ ಅದು. ಸಾಧ್ಯ. ಆದರೆ ಸಹನೆ- ಸಂಯಮದಿಂದ ಕಾಯಬೇಕು. ವಾಸ್ತವದಲ್ಲಿ ಈಗ ಅಂತಾರಾಷ್ಟ್ರೀಯ ಪೇಟೆಯಲ್ಲಿ ರುಪಾಯಿಯ ಮೌಲ್ಯ ತನ್ನ ನಿಜ ಮೌಲ್ಯಕ್ಕಿಂತ ಸಾಕಷ್ಟು ಕೆಳಹಂತವನ್ನು ತಲುಪಿದೆ. ಅದು ತೀರಾ ಕೃತಕ ಎನ್ನಬಹುದು. ಕೆಲವು ತಜ್ಞರ ಪ್ರಕಾರ, ಇನ್ನೂ 12ರಿಂದ 18 ತಿಂಗಳ ಅವಧಿಯಲ್ಲಿ ಈ ಇಳಿತದ ಪ್ರವೃತ್ತಿಯ ಜತೆಯಲ್ಲೇ ಭಾರತ ಬದುಕಬೇಕು. ಆದರೆ ಇದು ಕೇವಲ ಭಾರತದ ಸಮಸ್ಯೆ ಅಲ್ಲ. ಚೀನವೂ ಸೇರಿದಂತೆ ಏಷ್ಯದ ಅನೇಕ ರಾಷ್ಟ್ರಗಳು ಈಗ ತೊಳಲಾಡುತ್ತಿವೆ. ಭಾರತೀಯ ಪಂಡಿತರಲ್ಲಿ ಅನೇಕರು 1.25 ಲಕ್ಷ ಕೋಟಿ ರು.ಗಳ ಆಹಾರ ಭದ್ರತೆ ಯೋಜನೆಯ ಸುದ್ದಿಯ ಪ್ರಕಟಣೆಯೇ ವ್ಯವಸ್ಥೆಯ ಕುಸಿತಕ್ಕೆ ಕಾರಣ ಎನ್ನುತ್ತಿದ್ದಾರೆ. ಆದರೆ, ಇದೇ ಪರಿಸ್ಥಿತಿ ಖಂಡದ ಇತರ ರಾಷ್ಟ್ರಗಳನ್ನು ಕಾಡುತ್ತಿದೆಯಲ್ಲ ಅದು ಯಾಕೆ?
ಕೊನೆ ಮಾತು
ಭಾರತೀಯ ಬ್ಯಾಂಕ್‌ಗಳು ಈಗ ಕೆಟ್ಟ ಸಾಲದ ವಸೂಲಿಯ ವಿಚಾರದಲ್ಲಿ ಭೀಕರ ಸಮಸ್ಯೆಯನ್ನೇ ಎದುರಿಸುತ್ತಿವೆ. ಏಪ್ರಿಲ್‌ನಲ್ಲಿದ್ದ ಕೆಟ್ಟ ಸಾಲದ ಪ್ರಮಾಣ 2.06 ಲಕ್ಷ ಕೋಟಿ ರುಪಾಯಿ. ಈಗ ಸುಮಾರು 3.23 ಲಕ್ಷ ಕೋಟಿ ರುಪಾಯಿಗಳು.
- ಸತ್ಯ