ಜನರಿಗಿಂದು ಶಾಪಿಂಗ್ ಮಾಲ್‌ಗೆ ಹೋಗುವುದಕ್ಕೂ ಬಿಡುವಿಲ್ಲ. ಹೀಗಾಗಿ, ಆನ್‌ಲೈನ್ ಮಾರ್ಕೆಟಿಂಗ್ ಭಾರತದಲ್ಲಿ ದಿನೇದಿನಕ್ಕೆ ರೆಕ್ಕೆ ಹರಡಿಕೊಳ್ಳುತ್ತಿದೆ. ಅದರಲ್ಲೂ ಅಮೇಜಾನ್.ಕಾಮ್ ಭಾರತಕ್ಕೆ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟ ಮೇಲಂತೂ ಈ ಹವಾ ಇನ್ನೂ ಹೆಚ್ಚಾಗಿದೆ.
ಭಾರತದಲ್ಲಿ ಸಾಮಾನ್ಯವಾಗಿ ಸಂಜೆಯ ಸಮಯವನ್ನು ಶಾಪಿಂಗ್‌ಗೆ ಮೀಸಲಿಡುವುದುಂಟು. ಆದರೆ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಯಾವ ಹೊತ್ತಾದರೇನು? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಶೇ.80ರಷ್ಟು ಆನ್‌ಲೈನ್ ಶಾಪಿಂಗ್ ನಡೆಯುವುದು ಕೂಡ ಮಧ್ಯಾಹ್ನ ಮತ್ತು ಸಂಜೆ ವೇಳೆಯೇ ಅಂತೆ. ಅದರಲ್ಲೂ ಮಂಗಳವಾರ, ಬುಧವಾರ, ಗುರುವಾರ ಆನ್‌ಲೈನ್ ಶಾಪಿಂಗ್ ಹೆಚ್ಚು ನಡೆಯುತ್ತದಂತೆ. 500 ವೈವಿಧ್ಯ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಿರುವ, 20 ಸಾವಿರ ಎಕ್ಸಿಕ್ಯೂಟಿವ್‌ಗಳನ್ನು ಹೊಂದಿರುವ 'ಇಬೇ' ಯಾಕೆ ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ ಎಂಬುದನ್ನು ವಿವರಿಸಿದೆ.
1. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು.
2. ಶಾಪಿಂಗ್ ಸಮಯವನ್ನೇ ಆದಷ್ಟು ಆಫೀಸಿನ ಬಿಡುವಿನ ವೇಳೆಯಲ್ಲಿ ಹೊಂದಿಸುವುದಕ್ಕೆ.
3. ಖಾಸಗಿ ಜೀವನಕ್ಕೆ ಹೆಚ್ಚು ಆದ್ಯತೆ ಕೊಡಲು.
4. ಈಗಿನ ಜಮಾನಕ್ಕೆ ಅಪ್‌ಡೇಟ್ ಆಗಲು.
5. ಕೆಲವೊಂದು ರಿಯಾಯಿತಿ ಪಡೆಯಲು.
ಇನ್ನಷ್ಟು ನಗರಗಳಿಗೆ ವಿಸ್ತಾರ
ಸರೋವರ ಹೋಟೆಲ್ ಸಮೂಹ ದಕ್ಷಿಣ ಭಾರತದಲ್ಲಿ ತನ್ನ ವಹಿವಾಟು ಇನ್ನಷ್ಟು ವಿಸ್ತರಿಸಲಿದೆ. ದಕ್ಷಿಣ ಭಾರತದ ಆರು ನಗರಗಳಲ್ಲಿ ಹೊಸ ಹೋಟೆಲ್ ಆರಂಭಿಸಲು ಮುಂದಾಗಿದೆ. ಕೇರಳದ ಬೇಕಲ, ತೇಕ್ಕಡಿ, ಆಂಧ್ರಪ್ರದೇಶದ ತಿರುಪತಿಯಲ್ಲಿ ಮೂರು ಹೋಟೆಲ್‌ಗಳನ್ನು ಆರಂಭಿಸಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರೋವರ ಸಮೂಹ ಕಾರ್ಲ್‌ಸನ್ ರೆಜಿಡೋರ್ ಹೊಟೇಲ್ ಸಮೂಹದ ಜತೆ ಒಪ್ಪಂದ ಮಾಡಿಕೊಂಡಿದೆ.
ಅತಿದೊಡ್ಡ ವ್ಯಾಪಾರಿ ವಲಯ
ಜನಪ್ರಿಯ ಆನ್‌ಲೈನ್ ಮಾರುಕಟ್ಟೆ ತಾಣ ಇ-ಬೇ ವಿಶ್ವದ ಅತ್ಯಂತ ದೊಡ್ಡ ವ್ಯಾಪಾರಿ ಸಮೂಹವನ್ನು ದೇಶದಲ್ಲಿ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಅದು ಅಖಿಲ ಭಾರತ ಕೈಗಾರಿಕಾ ಒಕ್ಕೂಟ (ಸಿಎಐಟಿ) ಜತೆ ಸಹಭಾಗಿತ್ವ ಮಾಡಿಕೊಳ್ಳಲಿದೆ. ಈ ಒಕ್ಕೂಟದ ಅಡಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಉದ್ಯಮಿಗಳು ಇದ್ದಾರೆ. ಈ ಮೂಲಕ ಇ- ಕಾಮರ್ಸ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸಲು ವೆಬ್‌ಸೈಟ್ ಮುಂದಾಗಿದೆ.
ಸಾಲ ಇಳಿತ, ಠೇವಣಿ ಏರಿಕೆ
ಕಳೆದ ಒಂದು ವರ್ಷದಲ್ಲಿ ಬ್ಯಾಂಕ್ ಠೇವಣಿ ಏರಿಕೆಯಾಗಿದೆ. ಅದರ ಪ್ರಮಾಣ ಶೇ.14.98ರಷ್ಟಾಗಿದೆ. ಒಟ್ಟಾರೆಯಾಗಿ ಹೇಳುವುದಿದ್ದರೆ ರು. 79,31,104 ಕೋಟಿ ಸಂಗ್ರಹವಾಗಿದೆಯಂತೆ. ಹೀಗೆಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಕಳೆದ ವರ್ಷ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಪ್ರಮಾಣ ರು. 68,97,225 ಕೋಟಿ ಆಗಿತ್ತು. ಬ್ಯಾಂಕ್‌ಗಳಲ್ಲಿನ ಸಾಲದ ಪ್ರಮಾಣದಲ್ಲೂ ಅಲ್ಪ ಪ್ರಮಾಣದ ಇಳಿಕೆ ಉಂಟಾಗಿದೆ. ಏಪ್ರಿಲ್ 4ನೇ ತಾರೀಕಿಗೆ ಕೊನೆಗೊಂಡಂತೆ ಬ್ಯಾಂಕ್‌ಗಳ ಸಾಲದ ಪ್ರಮಾಣ ರು. 60,86,879 ಕೋಟಿ ಇದೆ.