ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಹೋಗಲು ಶಕ್ತಿಯಿಲ್ಲ. ಆದರೆ ಶೀಘ್ರ ಹೋಗಬೇಕು. ಅದಕ್ಕೆ ಬೇಕು ಮನಸ್ಸಿನ ವೇಗದಲ್ಲಿ ಚಲಿಸುವ ರೈಲುಗಳು!
ಹೌದು ಸ್ವಾಮಿ. ನಮ್ಮ ದೇಶದಲ್ಲೂ ಅಂಥ ಶರವೇಗದ ರೈಲುಗಳ ಜಮಾನ ನಿಧಾನಕ್ಕೆ ಶುರುವಾದಂತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರಲು ನಮ್ಮ ದೇಶದಲ್ಲಿ ಇನ್ನೂ ಕೆಲ ಸಮಯ ಬೇಕು. ಹಲವು ಅಡೆತಡೆಗಳ ನಡುವೆಯೂ ಹಾಲಿ ಯುಪಿಎ ಸರ್ಕಾರ ಇಂಥ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮನಸ್ಸು ಮಾಡಿದ್ದು ದೊಡ್ಡ ವಿಷಯವೇ ಸರಿ.
ಆದರೆ ಅದಕ್ಕೆ ತಾಂತ್ರಿಕ ನೆರವು ನೀಡುತ್ತಿರುವುದು ಮಾತ್ರ ಚೀನಾ ರೇಲ್ವೆ ನಿಗಮ. ಇದು ಮಾತ್ರ ಕೊಂಚ ಆಲೋಚನೆ ಮಾಡಬೇಕಾದ ವಿಚಾರ. ಏಕೆಂದರೆ ರಾಜಕೀಯವಾಗಿ ಆ ರಾಷ್ಟ್ರ ನಮ್ಮ ದೇಶದ ಜತೆ ಯಾವ ರೀತಿಯ ರಾಜತಾಂತ್ರಿಕ ಸಂಬಂಧ ಹೊಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ನಮ್ಮಲ್ಲಿ ಎಲ್ಲೆಲ್ಲಿ?
ದೆಹಲಿ- ಚಂಡೀಗಡ- ಅಮೃತಸರ (450 ಕಿ.ಮೀ) ಯೋಜನೆಗೆ ತಾಂತ್ರಿಕ ಮೌಲ್ಯಮಾಪನ ಸೇರಿದಂತೆ ಹಲವು ವಿಚಾರಗಳಿಗೆ ಒಪ್ಪಿಗೆ ಸಿಕ್ಕಿದೆ.
ಪುಣೆ- ಮುಂಬೈ- ಅಹಮದಾಬಾದ್ (650 ಕಿ.ಮೀ) ಯೋಜನೆಗೆ ಫ್ರಾನ್ಸ್, ಇಟಲಿ ಮಕ್ಕು ರೈಟ್ಸ್ (ಇಂಡಿಯಾ) ಸಂಸ್ಥೆಗಳು ಪೂರ್ವಭಾವಿ ಅಧ್ಯಯನ ನಡೆಸುತ್ತಿವೆ.
ದೆಹಲಿ- ಆಗ್ರಾ- ಲಖನೌ- ವಾರಾಣಸಿ- ಪಟನಾ ನಡುವಿನ (991 ಕಿ.ಮೀ.) ಯೋಜನೆ ಬಗ್ಗೆ ಯುನೈಟೆಡ್ ಕಿಂಗ್‌ಡಮ್‌ನ ಮಾಟ್ ಮೆಕ್‌ಡೊನಾಲ್ಡ್ ಸಂಸ್ಥೆ ಕಾರ್ಯಸಾಧು ವರದಿ ಸಿದ್ಧಪಡಿಸುತ್ತಿದೆ.
ಚೆನ್ನೈ- ಬೆಂಗಳೂರು- ಕೊಯಮತ್ತೂರು- ಎರ್ನಾಕುಳಂ- ತಿರುವನಂತಪುರಂ ನಡುವೆ (850 ಕಿ.ಮೀ) ಬುಲೆಟ್ ಟ್ರೇನ್ ಓಡಿಸಲು ಜಪಾನ್ ರೇಲ್ವೆ ತಾಂತ್ರಿಕ ಸಮಿತಿ (ಜಾರ್ಟ್ಸ್) ಮತ್ತು ಓರಿಯಂಟಲ್ ಕನ್ಸಲ್ಟೆಂಟ್ಸ್ ವರದಿ ಸಿದ್ಧಪಡಿಸುತ್ತಿವೆ.
ಹೌಡಾ- ಹಲ್ದಿಯಾ (ಪಶ್ಚಿಮ ಬಂಗಾಳ) ನಡುವೆ ಬುಲೆಟ್ ಟ್ರೇನ್ ಓಡಿಸಬೇಕೆಂಬುದು ರೇಲ್ವೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ ಕನಸು. ಇದಕ್ಕಾಗಿ ಸ್ಪೇನ್‌ನ ಕಂಪನಿಯೊಂದು ವರದಿ ತಯಾರಿಸುತ್ತಿದೆ.
ಹೈದರಾಬಾದ್- ದ್ರೋಣಕಲ್ಲು- ವಿಜಯವಾಡ- ಚೆನ್ನೈ (664 ಕಿ.ಮೀ.) ಯೋಜನೆ ಸಾಧ್ಯವಾದೀತೇ ಎಂಬ ಬಗ್ಗೆ ಪಾರ್ಸನ್ಸ್ ಬ್ರಿಂಕೆರ್‌ಹೋಫ್ (ಇಂಡಿಯಾ) ಸಂಸ್ಥೆ ಅಧ್ಯಯನ ನಡೆಸುತ್ತಿದೆ.
ಖಾಸಗಿ ಪಾಲುದಾರಿಕೆಯತ್ತ ನೋಟ
ದೇಶದಲ್ಲಿ ಬುಲೆಟ್ ಟ್ರೇನ್ ಓಡಬೇಕು ಎನ್ನುವುದು ಎಲ್ಲರ ಕನಸು. ಆದರೆ ಪ್ರತಿ ಕಿ.ಮೀ. ಯೋಜನೆ ಜಾರಿಗೆ ತಗಲುವ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ ರು. 200 ಕೋಟಿ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಖಾಸಗಿ ಬಂಡವಾಳ ಹೂಡಿಕೆಯತ್ತ ಗಮನ ಹರಿಸಲೇಬೇಕಾಗಿದೆ.
ವೇಗ ಹೆಚ್ಚಿಸಲು ಕ್ರಮ
ದೇಶದಲ್ಲಿ ಅತ್ಯಂತ ವೇಗವಾಗಿ ಚಲಿಸುವ ರೈಲುಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜಧಾನಿ ಮತ್ತು ಶತಾಬ್ದಿ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 160-200 ಕಿ.ಮೀ. ವರೆಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದಾಗಿ ಒಂದು ಸ್ಥಳದಿಂದ ಮತ್ತೊಂದೆಡೆ ಶೀಘ್ರ ತಲುಪಬಹುದು. ಆದರೆ ಅದಕ್ಕೆ ಪೂರಕವಾಗಿ ಎಲ್ಲೆಡೆ ಹಳಿಗಳು ಸೇರಿದಂತೆ ಮೂಲ ಸೌಕರ್ಯಗಳೂ ಅಭಿವೃದ್ಧಿಯಾಗಬೇಕಾಗಿದೆ ಎಂಬ ವಿಚಾರವೂ ಅಷ್ಟೇ ಸತ್ಯ.
ಈ ಯೋಜನೆ ಮೂಲಕ ಈಗಾಗಲೇ ಕಿಕ್ಕಿರಿದು ತುಂಬಿರುವ ನಾಲ್ಕು ಮೆಟ್ರೋಗಳ ಮೇಲಿರುವ ಹೊರೆ ತಗ್ಗಿಸುವ ಆಶಯವೂ ಇದೆ. ಮಾತ್ರವಲ್ಲದೆ ಎರಡು ಮತ್ತು ಮೂರನೇ ಹಂತದ ನಗರಗಳನ್ನೂ ಅಭಿವೃದ್ಧಿಪಡಿಸುವ ಯೋಜನೆ ಇದೆ.
ಅಮೆರಿಕ ಹಿಂದಿಕ್ಕಿದ ಚೀನಾ
ಜಪಾನ್, ಚೀನಾ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ಶರವೇಗದ ರೈಲುಗಳ ಕನಸು ಕಂಡು ಅನುಷ್ಠಾನವಾಗಿದೆ. ಆದರೆ ಅಮೆರಿಕದಲ್ಲಿ ಕೆಲವೆಡೆ ಮಾತ್ರ ಇದು ಜಾರಿಯಾಗಿಲ್ಲ. ಚೀನಾದಲ್ಲಿ ಹಾಲಿ ಇರುವ ಹಳಿಯಲ್ಲಿ 200 ಕಿ.ಮೀ. ವೇಗದಲ್ಲಿ ರೈಲುಗಳು ಚಲಿಸುವಂತೆ ಮಾಡಲಾಗಿದೆ. ಜತೆಗೆ ಹೊಸ ಯೋಜನೆಗಳ ಪೈಕಿ ಪ್ರತಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಚಲಿಸುವಂತೆ ಮಾಡಲಾಗಿದೆ.
ಹೇಗಿದ್ದರೂ ಇನ್ನು ತಿಂಗಳಲ್ಲಿ ಹೊಸ ಸರ್ಕಾರ ಬರಲಿದೆ. ಆ ಸರ್ಕಾರದ ಆಡಳಿತದ ಅವಧಿಯಲ್ಲಿ ಬುಲೆಟ್ ಟ್ರೇನ್ ಯೋಜನೆಗೆ ವೇಗ ಸಿಗಲಿದೆಯೋ ನೋಡಬೇಕು.
= ಸದಾಶಿವ ಕೆ.
khandige29@gmail.com