ವಿಮೆ ಪಡೆದುಕೊಳ್ಳುವುದು ಆದ್ಯತೆಯ ವಿಚಾರವಾಗಿದೆ. ಆದರೆ ಅದರಲ್ಲೇ ಮೋಸ ನಡೆಯುತ್ತಿದೆ ಎಂಬ ವಿಚಾರ ದೃಢವಾದರೆ ಹೇಗಿರುತ್ತದೆ? ವ್ಯಕ್ತಿಯೊಬ್ಬನಿಗೆ ಮೂರು ಪಾಲಿಸಿಗಳ ಮೂಲಕ 17 ಲಕ್ಷ ನೀಡಿದ್ದ ಘಟನೆ ನಡೆದಿತ್ತು. ಇಲ್ಲಿ ಪ್ರಕರಣ ಏನಾಗಿತ್ತೆಂದರೆ ಪಾಲಿಸಿ ನೀಡಿದ 2 ವಾರಗಳ ಒಳಗಾಗಿ ಕ್ಲೇಮ್ ಮಾಡಲಾಗಿತ್ತು! ಈ ಬಗ್ಗೆ ಸಂಶಯದಿಂದ ವಿಚಾರಣೆ ನಡೆಸಿದ ಬಳಿಕ ಅಸುನೀಗಿದ್ದ ವ್ಯಕ್ತಿಯೊಬ್ಬನ ಹೆಸರಿನಲ್ಲಿ ವಿಮೆ ಮಾಡಿಸಿಕೊಂಡು ಹಣ ಪಡೆದು ವಂಚಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಇಂಥ ವಂಚನೆಗಳು ಕಳೆದ 5 ವರ್ಷಗಳಲ್ಲಿ ಹೆಚ್ಚಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಕಂಪನಿಗಳು ಗ್ರಾಹಕನಿಗೆ ವಂಚಿಸುತ್ತವೆ ಎಂಬ ಬಗ್ಗೆ ವರದಿಯಾಗುತ್ತವೆ. ಆದರೆ ಇಲ್ಲಿ ಗ್ರಾಹಕರು ಕಂಪನಿಗಳಿಗೆ ವಂಚಿಸಿದ ಪ್ರಕರಣ ನಡೆದಿದೆ. ಇಂಥ ಪ್ರಕರಣಗಳಿಂದಾಗಿ ಕಂಪನಿಗಳಿಗೆ ಮಾತ್ರವಲ್ಲದೆ ಇತರ ನಿಷ್ಠಾವಂತ ವಿಮಾದಾರರಿಗೆ ಕೂಡ ನಷ್ಟ, ಅನಾನುಕೂಲಗಳು ಉಂಟಾಗುತ್ತವೆ.
ಇಲ್ಲಿ ನಡೆಯುವ ಹೆಚ್ಚಿನ ವಂಚನೆ ಪ್ರಮಾಣ ಹೇಗಿರುತ್ತದೆ ಎಂದರೆ ನಿಧನ ಹೊಂದಿರುವ ವ್ಯಕ್ತಿ ಹೆಸರಲ್ಲಿ ವಿಮೆ ಮಾಡಿಸಿಕೊಂಡು ನಕಲಿ ವೈದ್ಯಕೀಯ ದಾಖಲೆಗಳು ಮತ್ತು ಇತರ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ವಿಮಾ ಕಂಪನಿಗಳಿಂದ ಹಣ ಪಡೆದುಕೊಳ್ಳುತ್ತಾರೆ. ಇದು ಕೇವಲ ಪ್ರಾದೇಶಿಕವಾಗಿ ನಡೆಯುತ್ತದೆ.
ಇಂಥ ಪ್ರಕರಣಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಲು ವಿಮಾ ಸಂಸ್ಥೆಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿಮೆದಾರರು ಸಲ್ಲಿಸಿದ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಒಂದು ವೇಳೆ ಇಂಥ ವಂಚನೆ ಪ್ರಕರಣಗಳು ಪತ್ತೆಯಾದಲ್ಲಿ ಅಂಥ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಮಾ ಸಂಸ್ಥೆಗಳು ಹಿಂಜರಿಯಬಾರದು.
ಇತ್ತೀಚಿನ ದಿನಗಳಲ್ಲಿ ವಂಚನೆ ತಡೆಯಲೆಂದೇ ವಿಮಾ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿವೆ. ಮಾತ್ರವಲ್ಲದೆ, ದಾಖಲೆಗಳ ಪರಿಶೀಲನೆ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿವೆ. ಇದಕ್ಕಾಗಿ ಇಂಥಕೆಲಸದಲ್ಲಿ ತೊಡಗಿರುವ ತಂಡಕ್ಕೆ ವಿಶೇಷ ತರಬೇತಿಯನ್ನೂ ನೀಡಲಾಗಿರುತ್ತದೆ.
ಕಂಪನಿಗಳ ಜತೆಗೆ ನ್ಯಾಯಯುತವಾಗಿ ವಿಮೆ ಮಾಡಿಸಿಕೊಂಡವರೂ ವಂಚನೆ ತಡೆಯುವಲ್ಲಿ ನೆರವಾಗುತ್ತಿದ್ದಾರೆ ಎನ್ನುವುದು ಸಂತಸದ ವಿಚಾರ. ಈ ಮೂಲಕ ವಿಮಾ ಗ್ರಾಹಕರೂ ವಂಚನೆ ಪ್ರಕರಣಗಳಿಗೆ ತಡೆ ಹಾಕಲು ಕೈಜೋಡಿಸುತ್ತಿರುವುದು ಸ್ವಾಗತಾರ್ಹ ವಿಚಾರ.
ಕೆಲವೊಂದು ಬಾರಿ ವಂಚನೆ ಪ್ರಕರಣಗಳು ಉದ್ದೇಶಪೂರ್ವಕವಾಗಿ ಇರುವುದಿಲ್ಲ. ವಿಮಾ ಕ್ಷೇತ್ರದಲ್ಲಿನ ನಿಯಮಗಳ ಬಗ್ಗೆ ಗ್ರಾಹಕರಿಗೆ ಅರಿವು ಇಲ್ಲದೇ ಇರುವುದರಿಂದ ಇಂಥ ವಂಚನೆಗಳು ನಡೆದುಹೋಗುತ್ತವೆ. ಹೀಗಾಗಿ, ವಿಮಾ ಕಂಪನಿಗಳೂ ಕೂಡ ಗ್ರಾಹಕರಿಗೆ ವಿಮೆ ಮಾಡಿಸಿಕೊಳ್ಳುವ ವೇಳೆ ಯಾವುದು ಕಾನೂನು ಬದ್ಧ ಮತ್ತು ಕಾನೂನಿಗೆ ವಿರುದ್ಧ ಎಂಬ ವಿಚಾರದ ಬಗ್ಗೆಯೂ ತಿಳಿಸಿಕೊಡುತ್ತವೆ.
-ಪಿ.ರವಿ ಕುಟುಂಬ ರಾವ್
ಬಜಾಜ್ ಅಲಯನ್ಸ್ ವಿಮೆ ತಾಂತ್ರಿಕ ವಿಭಾಗದ ಮುಖ್ಯಸ್ಥ