ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಪ್ರಕಟಿಸಿದ ಅಂಕಿ-ಅಂಶಗಳಂತೆ, ಸಗಟು ವ್ಯಾಪಾರದ ಸೂಚ್ಯಂಕ ಆಧರಿತ ಇನ್ಫ್ಲೇಷನ್ (ಹಣದ ಅತಿಪ್ರಸರಣ) ಡಿಸೆಂಬರ್ನಲ್ಲಿ ಶೇಕಡಾ 6.16ಕ್ಕೆ ಇಳಿದಿತ್ತು. ನವೆಂಬರ್ನಲ್ಲಿ ಕಂಡುಬಂದಿದ್ದ ಅಂಕಿ ಶೇಕಡಾ 7.5. ಇದರ ಪರಿಣಾಮವಾಗಿ ಚಿಲ್ಲರೆ ವ್ಯಾಪಾರದ ಸೂಚ್ಯಂಕದಲ್ಲೂ ಇಳಿಕೆ ಕಂಡುಬಂದಿದೆ. ಆದ್ದರಿಂದ ಜನವರಿ 28 ರಂದು ಹಣ ನೀತಿಯ ಪ್ರಕಟಣೆಯ ಸಮಯದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ವಲ್ಪ ನಿರಾಳವಾಗಿ ಉಸಿರಾಡಬಹುದು. ಹಾಗೆಂದ ಮಾತ್ರಕ್ಕೇ ಬ್ಯಾಂಕ್ ಬಡ್ಡಿ ದರ ಇಳಿಯುತ್ತದೆ ಎಂದೇನೂ ಅಲ್ಲ.
ಇದೇ ಸಮಯದಲ್ಲೇ ವಿತ್ತಮಂತ್ರಿ ಪಿ. ಚಿದಂಬರಮ್ ಅವರು ಚಾಲ್ತಿ ವರ್ಷದ ಲೆಕ್ಕ ಕೊರತೆ ಮೊದಲ ಅಂದಾಜುಗಳಿಗಿಂತ ಕಡಿಮೆಯಾಗಲಿದೆ ಎಂದು ಪ್ರಕಟಿಸಿದ್ದಾರೆ. ಆದರೆ ಭಾರತದ ಪ್ರಗತಿಯ ವೇಗ (ಜಿಡಿಪಿ- ಒಟ್ಟು ಉತ್ಪಾದನೆಯ ಮೌಲ್ಯದ ಲೆಕ್ಕದಲ್ಲಿ) ಶೇಕಡಾ 6.2ರಷ್ಟಾಗುವುದೆಂದು ವಿಶ್ವ ಬ್ಯಾಂಕ್ ನಿರೀಕ್ಷಿಸಿರುವುದನ್ನು ನಂಬುವುದು ಕಷ್ಟ. ಅನೇಕ ಪಂಡಿತರ ಪ್ರಕಾರ ದೇಶದ ಪ್ರಗತಿಯ ವೇಗ ಶೇಕಡಾ ಆರಕ್ಕಿಂತ ಹೆಚ್ಚುವುದು ತುಂಬಾ ಕಷ್ಟ. ಈ ಪರಿಸ್ಥಿತಿಯೇ ಮುಂದುವರಿದರೆ, ಆರ್ಥಿಕ ವ್ಯವಸ್ಥೆ ಸುಧಾರಿಸಲೂಬಹುದು.
ಬಾಂಡ್ ಪೇಟೆ ಸುಗ್ಗಿ
ಸರ್ಕಾರಿ ಬಾಂಡ್ಗಳು ಹಾಗೂ ಕಾರ್ಪೊರೇಟ್ ಡಿಬೆಂಚರ್ಗಳ ಪೇಟೆಯಲ್ಲಿ ಸ್ವಾಗತಾರ್ಹ ಚಟುವಟಿಕೆ ಕಂಡು ಬಂದಿದೆ. ಕೆಲವು ಕಂಪೆನಿಗಳ ಕೂಪನ್ ದರ ಶೇಕಡಾ 12ರಷ್ಟು ಮಧ್ಯಮ ವರ್ಗದ ಹೂಡಿಕೆಗಾರರಿಗೆ, ನಿರ್ದಿಷ್ಟ ಅವಧಿಯ ನಿರ್ದಿಷ್ಟ ಪ್ರತಿಫಲ ನೀಡುವಂತಹ ಹೂಡಿಕೆಯಲ್ಲಿ ಆಕರ್ಷಣೆ ಇದೆ. ಸಾಮಾನ್ಯ ಹೂಡಿಕೆದಾರರೇ ಕಾರ್ಪೊರೇಟ್ ಬಾಂಡ್ ಪೇಟೆಯಲ್ಲಿ ಹೆಚ್ಚು ವಿಶ್ವಾಸವನ್ನಿಡುತ್ತಾರೆ. ಮ್ಯೂಚ್ಯುಯಲ್ ಫಂಡ್ಗಳಲ್ಲಿನ ಪ್ರತಿಫಲ ಸ್ವಲ್ಪ ಹೆಚ್ಚಿರುವುದಾದರೂ, ಅದು ಅನಿಶ್ಚಿತ. ಪೇಟೆಯ ಏರಿಳಿತವನ್ನು ಅದು ಅವಲಂಬಿಸಿದೆ.
ಈ ವ್ಯವಹಾರದಲ್ಲಿ ಏಜೆಂಟರಿಗೆ ಸಿಗುವ ಕಮಿಷನ್ ಕಡಿಮೆ. ಶೇಕಡಾ 0.5 ನಿಂದ ಹಿಡಿದು ಶೇಕಡಾ ಒಂದರವರೆಗೆ ಮಾತ್ರ. ಆದರೆ ವ್ಯವಹಾರದ ಪ್ರಮಾಣ ಹೆಚ್ಚಿರುವುದರಿಂದ ಏಜೆಂಟರೂ ಬಾಂಡ್ಗಳನ್ನು ಕೊಳ್ಳಲು ಸಲಹೆ ಮಾಡುತ್ತಾರೆ.
ಷೇರುಪೇಟೆಯ ಸ್ಥಿತಿ
ಈಗ ಪೇಟೆಯಲ್ಲಿನ ಷೇರು ಬೆಲೆಗಳು ತೃಪ್ತಿಕರವಾಗಿದೆ. ಪೇಟೆಯ ಪರಿಸ್ಥಿತಿ, ಈಗಿರುವುದಕ್ಕಿಂತ ಕೆಳಮಟ್ಟಕ್ಕೆ ಹೋಗಲಾರದು. ನಿಜ. ಚುನಾವಣೆಯ ಸಮಯದಲ್ಲಿ ಭವಿಷ್ಯ ಕುರಿತಂತೆ ಭೀತಿ ಅಥವಾ ಆಸೆ ಇರಬಹುದು. ಅನೇಕ ಸಂದರ್ಭಗಳಲ್ಲಿ ಬಗೆಬಗೆಯ ನಿರೀಕ್ಷೆಗಳು ಪ್ರಕಟವಾಗಿ ತುಮುಲ ಉಂಟಾಗಲೂಬಹುದು. ಅದನ್ನು ಸಹಿಸಿಕೊಳ್ಳಬೇಕು.
ಷೇರುಪೇಟೆಯಲ್ಲಿ 2008ರಲ್ಲಿ ಆರಂಭದ ಹಂತದಲ್ಲಿ ಹಣ ಹೂಡಿದವರಿಗೆ ನಷ್ಟವಾಗಿರಬಹುದು. ಆದರೆ, 2008 ರ ಏಪ್ರಿಲ್ ಅನಂತರ ಹಣ ಹೂಡಿದವರಿಗೆ ನಷ್ಟವಾಗಿಲ್ಲ, ಲಾಭವೇ ಬಂದದೆ. ಈಗಲೂ ಪರಿಸ್ಥಿತಿ ಚೆನ್ನಾಗಿದೆ. ಆದರೆ ಸ್ವಲ್ಪ ಕಷ್ಟಪಟ್ಟು ಅಧ್ಯಯನ ಮಾಡಿ ಆರಿಸಿದ ಕಂಪನಿಗಳಲ್ಲಿ ಷೇರುಗಳನ್ನು ಹೂಡಿದರೆ ಲಾಭ ಗಳಿಸಲೂಬಹುದು.
ಲಾಭ ಗಳಿಕೆ ಲೆಕ್ಕದಲ್ಲಿ ಡಿಸೆಂಬರ್ ಕೊನೆಯಲ್ಲಿ ಇನ್ಫೋಸಿಸ್ ಕಂಪನಿಯ ವ್ಯವಹಾರ ಶುಭದ ಸೂಚನೆ ನೀಡಿದ್ದರೂ, ಕಾರ್ಖಾನೆಗಳ ಉತ್ಪಾದನೆಯ ಪ್ರಮಾಣದ ಏರಿಕೆ ಸ್ವಲ್ಪ ಆತಂಕಕಾರಿ.
ಕೊನೆ ಮಾತು
ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯ ನಿಯಂತ್ರಣಕ್ಕೆ ಸರ್ಕಾರ ಕಂಡುಕೊಂಡಿರುವ ಹಲವಾರು ದಾರಿಗಳಲ್ಲಿ ಶ್ರೀಮಂತ ಸರ್ಕಾರಿ ಕಂಪೆನಿಗಳಿಂದ ವಿಶೇಷ ಡಿವಿಡೆಂಡ್ ಪಡೆಯುವುದೂ ಒಂದು. ಸರ್ಕಾರದ ಆದೇಶದಂತೆ ಕೋಲ್ ಇಂಡಿಯಾ ಲಿಮಿಟೆಡ್ 18,317 ಕೋಟಿ ರುಪಾಯಿಗಳ ಡಿವಿಡೆಂಡ್ ನೀಡಿದೆ. ಅದರಲ್ಲೂ 16,485 ಕೋಟಿ ಸರ್ಕಾರದ ಪಾಲು. ಅದರ ಜತೆಗೆ 3100 ಕೋಟಿ ರುಪಾಯಿಗಳ ಡಿವಿಡೆಂಡ್ ತೆರಿಗೆಯೂ ಸಿಗಲಿದೆ. ಆದರೆ ಈ ಹಣವನ್ನು ಸರ್ಕಾರ ಉತ್ಪಾದನೆಗೆ ನೆರವಾಗುವ ಯೋಜನೆಗಳೋ ಅಥವಾ ಹಳೆಯ ಸಾಲವನ್ನು ತೀರಿಸುವುದಕ್ಕೋ ಬಳಸಿದೆ ದೇಶಕ್ಕೆ ಹಿತ. ಅದನ್ನು ಬಿಟ್ಟು ಹಣವನ್ನು ದೈನಂದಿನ ವೆಚ್ಚಕ್ಕೆ ಬಳಸಿದರೆ, ಅದು ನದಿಗೆ ಸುರಿದಂತೆಯೇ ಆಗುವುದಿಲ್ಲವೇ?
-ಸತ್ಯ