ಹೇಳಿ ಕೇಳಿ ಇದು ಬೆಲೆ ಏರಿಕೆಯ ಕಾಲ. ಬರುವ ವರಮಾನ ಆಧರಿಸಿ ಲೆಕ್ಕಾಚಾರ ಹಾಕಿ ಖರ್ಚು-ವೆಚ್ಚವನ್ನು ಸರಿದೂಗಿಸಲು ನಾವೆಲ್ಲರೂ ಸರ್ಕಸ್ ಮಾಡುತ್ತಲೇ ಇರುತ್ತೇವೆ. ಆದರೂ ತಿಂಗಳ ಕೊನೆಯ ಹೊತ್ತಿಗೆ ಇದು ಎಲ್ಲೋ ಒಂದು ಕಡೆ ಉಲ್ಟಾ ಹೊಡೆಯುತ್ತಿರುತ್ತದೆ. ಈ ಅನಿವಾರ್ಯ ಸಂಕಷ್ಟದಿಂದ ಪಾರಾಗುವುದು ಹೇಗೆ? ಒಂದಷ್ಟು ಪ್ಲಾನ್ ಹಾಗೂ ಮುನ್ನೆಚ್ಚರಿಕೆ ಮೂಲಕ ಈ ಸಂಕಷ್ಟವನ್ನು ತಕ್ಕ ಮಟ್ಟಿಗೆ ನಿವಾರಿಸಬಹುದು ಎಂದು ಆರ್ಥಿಕ ಪಂಡಿತರು ಹೇಳುತ್ತಾರೆ.
ಗೊತ್ತುಗುರಿಗಳ ನಿಗದಿ
ಆರ್ಥಿಕ ತಜ್ಞರ ಪ್ರಕಾರ ಎಲ್ಲಕ್ಕಿಂತ ಮೊದಲು ಆರ್ಥಿಕ ಗೊತ್ತುಗುರಿಗಳನ್ನು ನಿಗದಿ ಪಡಿಸಿಕೊಳ್ಳಬೇಕು. ನಿಮ್ಮ ಪ್ರಸಕ್ತ ಆರ್ಥಿಕ ಸ್ಥಿತಿ ಏನು? ನಿಮ್ಮ ಅಗತ್ಯಗಳೇನು ಮತ್ತು ನಿಮ್ಮ ಆರ್ಥಿಕ ಗುರಿ ಏನು ಎಂಬುದನ್ನು ನಿಷ್ಕರ್ಷೆ ಮಾಡಿಕೊಳ್ಳಿ. ನಿವೃತ್ತಿ ನಂತರದ ಜೀವನಕ್ಕಾಗಿ ಹಣ ಕೂಡಿಡಲು ಬಯಸುವಿರಾ? ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಡಬೇಕೆ? ಅಥವಾ ಸಾಲ ಇದ್ದರೆ ಅದನ್ನು ತೀರಿಸಲು ಹಣ ಎತ್ತಿಡಬೇಕೆ? ಇದನ್ನು ಯೋಚಿಸಲು ಸ್ವಲ್ಪ ಸಮಯ ವೆಚ್ಚ ಮಾಡಿ. ನಿಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿಕೊಳ್ಳಿ. ಕಾಗದದಲ್ಲಿ ಅದನ್ನು ಬರೆದುಕೊಳ್ಳಿ. ಒಂದು ವಿಷಯ ಮರೆಯಬೇಡಿ. ಇವೆಲ್ಲವೂ ನಿರ್ದಿಷ್ಟ ಮತ್ತು ನೈಜವಾಗಿರಲಿ. ಇದು ಹತಾಶೆಯ, ರೇಜಿಗೆ ಹುಟ್ಟಿಸುವ ವಿಷಯವಾಗಿದ್ದರೂ ತೀರಾ ಅನಿಶ್ಚಿತತೆಯ ಸನ್ನಿವೇಶದಲ್ಲಿ ಕೆಲವು ಬಹು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ.
ಭವಿಷ್ಯಕ್ಕಾಗಿನ ಗುರಿ ಅಗತ್ಯ
ಇದೆಲ್ಲದರ ಹೊರತಾಗಿಯೂ ಸುಭದ್ರ ಭವಿಷ್ಯಕ್ಕಾಗಿ ನೀವು ಗುರಿಯನ್ನು ಹೊಂದಿರಲೇಬೇಕು. ನಿಮ್ಮ ವೆಚ್ಚದ ಬಗ್ಗೆ ಗಮನವಿಡಲು ಆರಂಭಿಸಿದ ನಂತರ, ನಿಮ್ಮ ಸದ್ಯದ ಆರ್ಥಿಕ ಪರಿಸ್ಥಿತಿ ಏನು ಎಂಬುದು ನಿಮಗೆ ಗೊತ್ತಾಗುತ್ತದೆ. ಇದಾದ ನಂತರ ನೀವು, ಮೊದಲೇ ಬರೆದಿಟ್ಟುಕೊಂಡಿದ್ದ ಗುರಿಯನ್ನು ನಿಜಜೀವನದಲ್ಲಿ ತಲುಪುವುದು ಸಾಧ್ಯವೇ ಎಂಬುದನ್ನು ತಿಳಿಯುವುದು ಸುಲಭ. ಈ ಗುರಿ ತಲುಪಲು ಸಾಧ್ಯವಿಲ್ಲ ಎಂದಾದರೆ ನೀವು ನಿಮ್ಮ ಖರ್ಚನ್ನು ತಗ್ಗಿಸಿಕೊಳ್ಳಬೇಕು ಮತ್ತು ಬಜೆಟ್ ಅನ್ನು ರೂಪಿಸಿಕೊಳ್ಳಬೇಕು.
ವೆಚ್ಚದ ಬಗ್ಗೆ ಗಮನ ಹರಿಸಿ
ನಿಮ್ಮ ಆರ್ಥಿಕ ಗುರಿ ಸಿದ್ಧವಾಯಿತು. ನಂತರದ ಹೆಜ್ಜೆ ಎಂದರೆ ನಿಮ್ಮ ತಿಂಗಳ ವೆಚ್ಚದ ಬಗ್ಗೆ ಗಮನ ಹರಿಸಿ. ಇದಾದ ನಂತರ ನೀವು ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಬಜೆಟ್ ರೂಪಿಸಿರುತ್ತೀರಿ. ಇದರಲ್ಲೀಗ ದಿನಸಿ, ಉಡುಪು, ಹೋಟೆಲ್, ಕಾರಿನ ಸಾಲ, ಜೀವವಿಮೆ ಇತ್ಯಾದಿ ವಿಭಾಗವಾರು ವಿಂಗಡಣೆ ಮಾಡಿಕೊಳ್ಳಿ. ಆದರೆ ನಿಮ್ಮ ಬಜೆಟ್ ಕಿರು ಮತ್ತು ದೀರ್ಘಾವಧಿ, ಎರಡೂ ಲಕ್ಷ್ಯಗಳನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ.
ಹಣಕಾಸಿನ ಸ್ಥಿತಿಯ ಬಗ್ಗೆ ನಿಗಾ ಇರಲಿ
ನಿಮ್ಮ ಖರ್ಚಿನ ಬಗ್ಗೆ ಗಮನವಿರಲಿ. ವೈಯಕ್ತಿಕ ಖರ್ಚಿನ ಬಗ್ಗೆ ನಿಗಾ ಇರಿಸುವುದು ಸವಾಲಿನ ಹಾಗೂ ತ್ರಾಸದಾಯಕ ಕೆಲಸ. ಆದರೆ ನಿಮ್ಮ ಹಣಕಾಸಿನ ಸ್ಥಿತಿ-ಗತಿಯ ಸುಧಾರಣೆಗೆ ಇದು ಉತ್ತಮ ಉಪಾಯ ಎಂಬುದರಲ್ಲಿ ಎರಡು ಮಾತಿಲ್ಲ. ಹಣಕಾಸಿನ ಸ್ಥಿತಿಯ ಬಗ್ಗೆ ನಿಗಾ ವಹಿಸದ ಹೊರತು ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ವಿಶ್ಲೇಷಣೆ ಸಾಧ್ಯವಿಲ್ಲ. ಇದರ ಜತೆಗೆ ನಿಮ್ಮ ತಿಂಗಳ ಖರ್ಚಿನ ವೆಚ್ಚ ಮತ್ತು ಉಳಿತಾಯದ ಬಗ್ಗೆಯೂ ನಿಮಗೆ ಗೊತ್ತಾಗುತ್ತದೆ.
ಆರ್ಥಿಕ ಯೋಜನೆ
ಒಮ್ಮೆ ತಿಂಗಳ ಬಜೆಟ್ ರೂಪುಗೊಳ್ಳುತ್ತಿದ್ದಂತೆ ನಿಮ್ಮ ಸದ್ಯದ ಆರ್ಥಿಕ ಸ್ಥಿತಿಯ ಸ್ಪಷ್ಟ ಚಿತ್ರಣ ನಿಮಗೆ ದೊರೆಯುತ್ತದೆ. ಇದಕ್ಕನುಗುಣವಾಗಿ ನಿಮ್ಮ ಆರ್ಥಿಕ ಯೋಜನೆ ರೂಪಿಸಿಕೊಳ್ಳಬಹುದು. ಭವಿಷ್ಯದ ಆರ್ಥಿಕ ಯೋಜನೆ, ನಿಮಗೆ ಜೀವನದುದ್ದಕ್ಕೂ ಆದಾಯ ತಂದುಕೊಡುವಂತಾಗಲು ಅತ್ಯವಶ್ಯ ಎಂಬುದನ್ನು ಮರೆಯಬೇಡಿ.
ಬಹಳಷ್ಟು ಸಂದರ್ಭಗಳಲ್ಲಿ ನಾವು ವಿದ್ಯುತ್, ನೀರು ಬಿಲ್ ಇತ್ಯಾದಿಯನ್ನು ನಿರ್ದಿಷ್ಟ ಅವಧಿಯೊಳಗೆ ಪಾವತಿಸಲು ಮರೆತುಬಿಡುತ್ತೇವೆ. ಕೆಲವೊಮ್ಮೆ ಅಗತ್ಯ ದಾಖಲೆಗಳನ್ನು ಎಲ್ಲಿಯೋ ಇಟ್ಟು ಮರೆತುಬಿಟ್ಟಿರುತ್ತೇವೆ.ಪರಿಣಾಮ, ದಂಡ ಕಟ್ಟಿರುತ್ತೇವೆ. ಈ ಸಂದರ್ಭದಲ್ಲಿ ನಾವು ಅನುಭವಿಸುವ ಆತಂಕ, ನಮ್ಮನ್ನು ಇನ್ನಿಲ್ಲದ ಒತ್ತಡಕ್ಕೆ ದೂಡಿರುತ್ತದೆ. ನಿಗದಿತ ಕೆಲಸಗಳನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸುವ ಮೂಲಕ ಆರ್ಥಿಕ ಯಶಸ್ಸು ಸಾಧ್ಯ. ಹಾಗಾಗಿಯೇ ಮೇಲಿನ ಕೆಲವು ಸರಳ ಉಪಾಯಗಳ ಮೂಲಕ ಹಣಕಾಸಿನ ಸಮರ್ಥ ನಿರ್ವಹಣೆ ಸಾಧ್ಯ.
= ಪ್ರೇಮರಾಜು