ನಿಮ್ಮ ಮಗುವಿನಲ್ಲಿ ಉಳಿತಾಯ ಮನೋಭಾವ ಬೆಳೆಸಲು ಇನ್ನು ನೀವು ಪಿಗ್ಮಿ ಬ್ಯಾಂಕ್‌ಗೆ ಮೊರೆ ಹೋಗಬೇಕಿಲ್ಲ. ನೀವು ಬ್ಯಾಂಕ್‌ಗೆ ಹೋಗುವಾಗ ಕಡ್ಡಾಯವಾಗಿ ನಿಮ್ಮ ಮಗುವನ್ನು ಕರೆದುಕೊಂಡೇ ಹೋಗಿ. ಮಗುವಿಗಾಗಿ ಒಂದು ಖಾತೆ ತೆರೆದು ಕೊಟ್ಟು ಬಿಡಿ, ಇನ್ಮುಂದೆ ಮಗುವೇ ಆ ಖಾತೆಯನ್ನು ನಿಭಾಯಿಸಲಿದೆ.
ಹೌದು, ಇದು ಚಿಣ್ಣರದ್ದೇ ಖಾತೆ. ಇದುವರೆಗೆ ಕೇವಲ ಗಾರ್ಡಿಯನ್ ಜೊತೆಯಲ್ಲಿ ಮಾತ್ರ ತೆರೆಯಬಹುದಾಗಿದ್ದ ಮಕ್ಕಳ ಬ್ಯಾಂಕ್ ಖಾತೆಯನ್ನು ಇದೀಗ ಮಕ್ಕಳೇ ಸ್ವತಂತ್ರವಾಗಿ ತೆರೆಯಬಹುದು, ಅದನ್ನು ನಿಭಾಯಿಸಬಹುದು. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಆದೇಶದ ಪ್ರಕಾರ, 10 ವರ್ಷಗಳಿಗಿಂತ ಮೇಲ್ಪಟ್ಟ ಎಲ್ಲ ಮಕ್ಕಳೂ ಬ್ಯಾಂಕ್ ಖಾತೆ ಹೊಂದಲು ಅರ್ಹರಾಗಿರುತ್ತಾರೆ.
ಏನಿದು ಆದೇಶ?
ಆರ್‌ಬಿಐ ಮಕ್ಕಳ ಖಾತೆ ನಿಯಮಾವಳಿ ಕುರಿತು ಮೇ 6ರಂದು ತನ್ನ ಆದೇಶ ಹೊರಡಿಸಿದೆ. ಇದರ ಪ್ರಕಾರ, ಬ್ಯಾಂಕ್‌ಗಳಲ್ಲಿ ಬಾಲಕರು ಉಳಿತಾಯ, ನಿಗದಿತ ಠೇವಣಿ (ಫಿಕ್ಸೆಡ್ ಡಿಪಾಸಿಟ್) ಅಥವಾ ಮರುಕಳಿಸುವ ಠೇವಣಿ (ರಿಕರಿಂಗ್) ತೆರೆಯಬಹುದು, ಮತ್ತು ಖಾತೆಯನ್ನು ಸ್ವತಂತ್ರವಾಗಿ ನಿಭಾಯಿಸಬಹುದು. ಖಾತೆ ತೆರೆಯಲು ಏನೆಲ್ಲಾ ಅಗತ್ಯಗಳನ್ನು ಪೂರೈಸಬೇಕು ಎಂಬುದನ್ನು ಬ್ಯಾಂಕ್‌ಗಳು ನಿಗದಿಪಡಿಸಬಹುದು. ಖಾತೆಯ ಜೊತೆಗೆ ಎಟಿಎಂ, ಡೆಬಿಟ್ ಕಾರ್ಡ್, ಚೆಕ್ ಪುಸ್ತಕ, ಪಾಸ್ ಪುಸ್ತಕ ಹೀಗೆ ಏನೆಲ್ಲ ಕೊಡಬಹುದು ಎಂಬುದು ಆ ಬ್ಯಾಂಕ್‌ಗಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದೆ.
ವಿತ್ತೀಯ ಸೇರ್ಪಡೆ ನಿಯಮಾನುಸಾರ, ದೇಶದ ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡುವುದು ರಿಸರ್ವ್ ಬ್ಯಾಂಕ್‌ನ ಉದ್ದೇಶ. ಇದರ ಪ್ರಕಾರ ಈಗ ಚಿಣ್ಣರೂ ಬ್ಯಾಂಕ್ ಖಾತೆ ಹೊಂದಬಹುದಾಗಿದೆ. ಮಕ್ಕಳ ಖಾತೆಯ ನಿಯಮಾವಳಿಯಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ ಏಕರೂಪತೆ ತರುವುದು ಈ ಆದೇಶದ ಉದ್ದೇಶವಾಗಿದೆ. ಮಕ್ಕಳಲ್ಲಿ ಹಣಕಾಸು ವ್ಯವಹಾರ ಜ್ಞಾನ ವೃದ್ಧಿ ಮತ್ತು ಇದು ತನ್ನ ಹಣ ಎಂಬ ಕಾಳಜಿ ಹೊಂದುವಂತಾಗಲು ಮಕ್ಕಳದ್ದೇ ಪ್ರತ್ಯೇಕ ಖಾತೆಯಿದ್ದರೆ ಸಾಧ್ಯ. ಅದಕ್ಕೆಂದೇ ಈಗ ಪ್ರತ್ಯೇಕ ಖಾತೆ ತೆರೆಯಲು ಆರ್‌ಬಿಐ ಅನುವು ಮಾಡಿ ಕೊಟ್ಟಿದೆ.
ಈಗಾಗಲೇ ಇದೆ ಚಿಣ್ಣರಿಗಾಗಿ ಖಾತೆ
ಆರ್‌ಬಿಐ ನಿಯಮಾವಳಿಯ ಮೊದಲೇ ಕೆಲವು ಖಾಸಗಿ ಬ್ಯಾಂಕ್‌ಗಳು ಮಕ್ಕಳಿಗೆ ಗಾರ್ಡಿಯನ್ ಮೂಲಕ ಖಾತೆ ತೆರೆಯಲು ಅವಕಾಶ ನೀಡಿವೆ. ಅವುಗಳ ವಿವರ ಇಂತಿದೆ:
ಎಚ್‌ಡಿಎಫ್‌ಸಿ ಬ್ಯಾಂಕ್ 7ರಿಂದ 18 ವರ್ಷದೊಳಗಿನ ಮಕ್ಕಳಿಗೆ 'ಕಿಡ್ಸ್ ಎಡ್ವಂಟೇಜ್' ಎಕೌಂಟ್ ನೀಡುತ್ತಿದೆ. ಇದರ ಪ್ರಕಾರ, ಎಕೌಂಟ್ ಹೋಲ್ಡರ್ ಒಂದು ದಿನಕ್ಕೆ 2,500 ಹಣ ಎಟಿಎಂನಿಂದ ತೆಗೆಯಲು ಸಾಧ್ಯವಿದೆ. ಖಾತೆ ತೆರೆಯುವಾಗಲೇ 1 ಲಕ್ಷ ವರೆಗಿನ ಎಜುಕೇಶನ್ ಇನ್ಶೂರೆನ್ಸ್ ಕೂಡ ಸಿಗಲಿದೆ.
ಐಸಿಐಸಿಐ ಬ್ಯಾಂಕ್ 'ಯಂಗ್ ಸ್ಟಾರ್' ಹೆಸರಲ್ಲಿ ಮಕ್ಕಳ ಖಾತೆಗೆ ಈಗಾಗಲೇ ಅವಕಾಶ ನೀಡಿದೆ. 2,500 ಬ್ಯಾಲೆನ್ಸ್‌ನೊಂದಿಗೆ ದಿನಕ್ಕೆ 5000 ಹಣ ತೆಗೆಯಲು ಅವಕಾಶ ನೀಡಿದೆ. ಕೊಡಕ್ ಮಹೇಂದ್ರ ಬ್ಯಾಂಕ್‌ನ 'ಜೂನಿಯರ್ ಎಕೌಂಟ್' ಹೆಸರಲ್ಲಿ 5000 ಬ್ಯಾಲೆನ್ಸ್‌ನೊಂದಿಗೆ ದಿನಕ್ಕೆ 5000 ಹಣ ತೆಗೆಯಲು ಅವಕಾಶ ಕಲ್ಪಿಸಿದೆ. ಎಕ್ಸಿಸ್ ಬ್ಯಾಂಕ್ 'ಫ್ಯೂಚರ್ ಸ್ಟಾರ್' ಹೆಸರಲ್ಲಿ ಮಕ್ಕಳ ಖಾತೆಗೆ ಅವಕಾಶ ನೀಡಿದ್ದು, 2500 ಬ್ಯಾಲೆನ್ಸ್‌ನೊಂದಿಗೆ ದಿನಕ್ಕೆ 1500 ಹಣ ತೆಗೆಯಲು ಅವಕಾಶ ನೀಡಿದೆ. ಐಡಿಬಿಐ 'ಪವರ್ ಕಿಡ್ಸ್' ಅಂಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ 750- 1500 ನಿಗದಿ ಪಡಿಸಿದ್ದು, ದಿನದಲ್ಲಿ 2000 ವಹಿವಾಟು ನಡೆಸುವ ಅವಕಾಶ ಕಲ್ಪಿಸಿದೆ.
ಆರ್ಥಿಕ ತಜ್ಞ ಡಾ. ಜಯದೇವ ಪ್ರಸಾದ್ ಮೊಳೆಯಾರ್ ಪ್ರಕಾರ, 10 ವರ್ಷ ಎಂದರೆ ತುಂಬಾ ಬೇಗ ಆಯಿತು. ತೀರಾ ಚಿಕ್ಕ ಮಕ್ಕಳಾದ್ದರಿಂದ ಏನೂ ಗೊತ್ತಾಗುವುದಿಲ್ಲ, ಅದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಬ್ಯಾಂಕ್ ಖಾತೆ ಹೊಂದಲು 15ರಿಂದ 16 ವರ್ಷ ಸರಿಯಾದ ಪ್ರಾಯ. ಮಕ್ಕಳಿಗೆ ಬ್ಯಾಂಕಿಂಗ್ ಪಾಠವಾಗಲಿ ಎಂಬ ಉದ್ದೇಶದಿಂದ ಆರ್‌ಬಿಐ ಮಕ್ಕಳ ಖಾತೆಗೆ ಸೂಚನೆ ಹೊರಡಿಸಿರಬಹುದು. ಆದರೆ 10 ವರ್ಷಕ್ಕೇ ಖಾತೆ ತೆರೆದು ಎಟಿಎಂ ಕಾರ್ಡ್, ಪಾಸ್‌ವರ್ಡ್ ನೀಡುವುದು ಒಳ್ಳೆಯದಲ್ಲ ಎನ್ನುತ್ತಾರೆ.
ಒಟ್ಟಾರೆಯಾಗಿ ನೋಡುವುದಾದರೆ ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವುದು ಒಳ್ಳೆಯ ಬೆಳವಣಿಗೆಯಾದರೂ, ಈ ಮಕ್ಕಳ ಖಾತೆಯ ಹಿಂದೆ ಹಿರಿಯರ, ಪಾಲಕರ ಕಣ್ಗಾವಲು ಅತ್ಯಗತ್ಯ. ಮಕ್ಕಳಲ್ಲಿ ಆರ್ಥಿಕ ಭದ್ರತೆಗಾಗಿ ಬ್ಯಾಂಕ್ ಖಾತೆ ತೆರೆದುಕೊಡುವ ಪಾಲಕರು ಮಕ್ಕಳ ಭದ್ರತೆಯ ಬಗ್ಗೂ ಕಾಳಜಿ ವಹಿಸಿದರೆ ಸ್ವತಂತ್ರ ಖಾತೆಯ ದುರ್ಬಳಕೆ ತಡೆಯಬಹುದಾಗಿದೆ.
ಸಾಧಕ ಬಾಧಕಗಳೇನು?
ಸಾಧಕಗಳು
ಬ್ಯಾಂಕಿಂಗ್ ಪಾಠ, ವ್ಯವಹಾರಜ್ಞಾನ ಹೆಚ್ಚಳ
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಳ
ಹಣದ ಮಹತ್ವ ಅರಿಯಲು ಸಾಧ್ಯ
ಮಕ್ಕಳಲ್ಲಿ ಮನಿ ಮ್ಯಾನೇಜ್‌ಮೆಂಟ್
ಪಾಕೆಟ್ ಮನಿ ಸದ್ಬಳಕೆ ಸಾಧ್ಯ
ಅವರದ್ದೇ ಹಣ ಎಂದಾಗ ಖರ್ಚು, ವೆಚ್ಚ ಕಡಿತಗೊಳಿಸಿ, ಉಳಿತಾಯ ಮನೋಭಾವ ಬೆಳೆಯಲು ಸಾಧ್ಯ.
ಬಾಧಕಗಳು
ಮಕ್ಕಳ ಕೈಯ್ಯಲ್ಲಿ ಮಾಣಿಕ್ಯ ಸಿಕ್ಕಂತೆ ಆಗುವ ಸಾಧ್ಯತೆಯಿದ್ದು ಎಚ್ಚರಿಕೆ ಅಗತ್ಯ.
ಬೇರೆಯವರಿಂದ ದುರ್ಬಳಕೆ ಸಾಧ್ಯತೆ
ಮಕ್ಕಳ ಕಿಡ್ನಾಪ್ ಮೊದಲಾದ ಪ್ರಕರಣಗಳು ಹೆಚ್ಚುವ ಸಾಧ್ಯತೆ
ತನ್ನಲ್ಲೇ ಹಣ ಇರುವುದರಿಂದ ಬೇಕಾಗಿದ್ದು, ಬೇಡಾದ್ದೆಲ್ಲ ಖರ್ಚು ಮಾಡುವ ಸಾಧ್ಯತೆ.
ಈಗಾಗಲೇ ಎಟಿಎಂಗಳಿಗೆ ಸೂಕ್ತ ಭದ್ರತೆಯಿಲ್ಲ, ಇನ್ನು ಮಕ್ಕಳೂ ವಹಿವಾಟು ಪ್ರಾರಂಭಿಸಿದರೆ ಇನ್ನಷ್ಟು ರಿಸ್ಕ್ ಸಾಧ್ಯ.
ಕೆಲವೆ ಮಕ್ಕಳಲ್ಲಿ ಐಕ್ಯೂ ಉತ್ತಮವಾಗಿ ಬೆಳವಣಿಗೆ ಇರುತ್ತದೆ, ಇನ್ನು ಕೆಲವರಿಗೆ ನೂರಕ್ಕೆ ಎಷ್ಟು ಸೊನ್ನೆ, ಸಾವಿರಕ್ಕೆ ಎಷ್ಟು ಸೊನ್ನೆ ಎಂಬ ಜ್ಞಾನವೂ ಬೆಳೆದಿರುವುದಿಲ್ಲ. ಚೆಕ್ ಪುಸ್ತಕ ದುರ್ಬಳಕೆ ಸಾಧ್ಯ.
= ರಾಘವೇಂದ್ರ ಅಗ್ನಿಹೋತ್ರಿ