ಈ ಬಾರಿಯ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ಕಾರಣವೂ ಇದೆ. ಹತ್ತು ವರ್ಷಗಳ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದೆ. ಕಳೆದ ಸಲದಂತೆ ಈ ಬಾರಿಯೂ ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಳವಾಗಲಿದೆಯೇ ಎಂಬ ಬಗ್ಗೆ ಸಾವಿರಾರು ಮಂದಿ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.
ಮುಖ್ಯವಾಗಿ ಈ ಮೂರು ವರ್ಷಗಳಿಂದ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಗಳು ಆಗದೆ ಇರುವ ಹಿನ್ನೆಲೆಯಲ್ಲಿ ಈ ಸಲ ಭಾರಿ ನಿರೀಕ್ಷೆ ಇದೆ. ಚುನಾವಣೆ ವೇಳೆ ಹಾಲಿ ಹಣಕಾಸು ಸಚಿವ ಆದಾಯ ತೆರಿಗೆ ಮಿತಿಯನ್ನು ರು. 3 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು.
ಯಾರಿಗೆ ಮುಖ್ಯ?
ಮಧ್ಯಮ ವರ್ಗದವರಿಗೆ ವಿಶೇಷವಾಗಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಂಬಳವನ್ನೇ ನೆಚ್ಚಿಕೊಂಡು ಇರುವ ವರ್ಗಕ್ಕೆ ತೆರಿಗೆ ಮಿತಿ ಹೆಚ್ಚಳವಾದರೆ ಅನುಕೂಲವಾಗುತ್ತದೆ. ಆದಾಯದ ಪ್ರಮಾಣ ದಿನೇ ದಿನೇ ಏರುತ್ತಿದೆ. ಅದರ ಬಹುಪಾಲು ತೆರಿಗೆ ಕೊಡಲು ವಿನಿಯೋಗವಾಗುತ್ತದೆ ಎನ್ನುವುದರಲ್ಲಿ ಅರ್ಥವಿಲ್ಲದಿಲ್ಲ. ತೆರಿಗೆ ನಂತರದ ಆದಾಯದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತಿದೆ.
ಖ್ಯಾತ ತೆರಿಗೆ ತಜ್ಞ ಮತ್ತು ಪ್ರಸಿದ್ಧ ವಕೀಲ ನಾನಿ ಎ. ಪಾಲ್ಖಿವಾಲಾ, ಪ್ರತಿ ವರ್ಷದ ಬಜೆಟ್ ಬಳಿಕ ನಂತರ ನಡೆಯುತ್ತಿದ್ದ ವಿಶ್ಲೇಷಣೆಯಲ್ಲಿ ಆದಾಯ ತೆರಿಗೆ ವಿಚಾರವನ್ನು ಹಣದುಬ್ಬರಕ್ಕೆ ಜೋಡಿಸಿ ತೆರಿಗೆದಾರನಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಪಾದಿಸುತ್ತಿದ್ದರು. ಈ ಪ್ರಸ್ತಾಪದ ಬಗ್ಗೆ ಯಾವುದೇ ಹಣಕಾಸು ಸಚಿವರು ಈ ಬಗ್ಗೆ ಗಮನಹರಿಸಿಯೇ ಇಲ್ಲ.
ಸಾಮಾನ್ಯ ಬೇಡಿಕೆಗಳೇನು?
ಆದಾಯದ ಪ್ರಮಾಣ ಮತ್ತು ಹಣದುಬ್ಬರ ಗಣನೆಗೆ ತೆಗೆದುಕೊಂಡು ತೆರಿಗೆ ಮಿತಿಯನ್ನು ರು. 3.50 ಲಕ್ಷಕ್ಕೆ ಹೆಚ್ಚಿಸಬೇಕು.
ಹಿರಿಯ ನಾಗರಿಕರಿಗೆ ಹಾಲಿ ನೀಡಲಾಗಿರುವ ಮಿತಿಯನ್ನು ರು. 2.50 ಲಕ್ಷದಿಂದ ರು. 4 ಲಕ್ಷಕ್ಕೆ ಹೆಚ್ಚಿಸಬೇಕು.
ಗೃಹ ನಿರ್ಮಾಣ ಮತ್ತು ಖರೀದಿ ವೆಚ್ಚ ಗಗನಕ್ಕೇರಿದೆ. ಹೀಗಾಗಿ ಸಾಲ ಮರು ಪಾವತಿಯಲ್ಲಿ ರು. 1 ಲಕ್ಷ ಉಳಿತಾಯ ಮತ್ತು ರು. 1.50 ಲಕ್ಷ ಒಟ್ಟು ಆದಾಯದಲ್ಲಿ ಕಡಿತ ಮಾಡಿ ತೆರಿಗೆ ವಿನಾಯಿತಿ ಮಾಡುವ ಪದ್ಧತಿ ಅರ್ಥ ಕಳೆದುಕೊಂಡಿದೆ. ಅದರ ಮಿತಿಯನ್ನು ರು. 3 ಲಕ್ಷಕ್ಕೆ ಏರಿಕೆ ಮಾಡಬೇಕು.
- ರಮಾನಂದ ಶರ್ಮಾ