ಇನ್ನು ನಾಲ್ಕೇ ವರ್ಷಗಳಲ್ಲಿ, ಭಾರತೀಯರಲ್ಲಿನ ಷೇರು- ಸೆಕ್ಯೂರಿಟಿಗಳ ಪೇಟೆ ಲೆಕ್ಕದ ಸಂಪತ್ತಿನ ಮೌಲ್ಯ ಐದು ಲಕ್ಷ ಕೋಟಿ ಡಾಲರ್‌ಗಳನ್ನೂ ಮೀರಬಹುದೆನ್ನುವ ಒಂದು ವಿದೇಶಿ ತಜ್ಞ ಸಂಸ್ಥೆಯ ಅಂದಾಜು.
ಇದು ಒಂದು ದಶಕದ ಹಿಂದೆ ಇದ್ದ ಮೌಲ್ಯದ ಐದು ಪಟ್ಟು ವೃದ್ಧಿಯ ಸಂಕೇತ. ಆದರೆ, ಈ ಸಂಪತ್ತಿನಲ್ಲಿ ಬಹುಪಾಲು ಅತಿ ಶ್ರೀಮಂತ ಕುಟುಂಬಗಳಲ್ಲೇ ತುಂಬಿರುವ ಅಪಾಯವಿದೆ. ಈಗಲೂ ಭಾರತೀಯ ಮಧ್ಯಮ ವರ್ಗದ ಜನರಲ್ಲಿ ಸಂಪತ್ತು ಎಂದರೆ ಚಿನ್ನ, ಸ್ಥಿರಾಸ್ತಿ ಅಥವಾ ಬ್ಯಾಂಕ್ ಠೇವಣಿ ಎನ್ನುವ ನಂಬಿಕೆ ಇರುವುದರಿಂದ ಷೇರು ಸೆಕ್ಯೂರಿಟಿಗಳ ಮೌಲ್ಯ ಏರಿಕೆಯ ಲಾಭ ಸಾಮಾನ್ಯ ಕುಟುಂಬಗಳಿಗೆ ಲಭ್ಯವಾಗಲಿಕ್ಕಿಲ್ಲ.
ಆ ವರ್ಗದ ಜನರ ನಿಜವಾದ ಭೀತಿ; ಕೈಯಲ್ಲಿರುವ ಹಣ ಮಾಯವಾದರೇನು ಗತಿ? ಸಾಮಾನ್ಯರ ಈ ಭೀತಿಯನ್ನು ನಿವಾರಿಸುವುದು ಹೇಗೆ? ಅದೇ ಈಗ ವಿತ್ತೀಯ ನೀತಿ ನಿರೂಪಕರ ಮುಂದಿರುವ ನಿಜವಾದ ಸವಾಲು (ಈ ಟಿಪ್ಪಣಿ ಸಿದ್ಧವಾಗಿದ್ದು ಇರಾಕ್ ಅವಾಂತರಕ್ಕೆ ಮುಂಚೆ, ಈಗ ಜನರ ಮುಂದಿರುವ ಭೀತಿ ಇರಾಕ್‌ನ ಬೆಳವಣಿಗೆ ಭಾರತೀಯರನ್ನು ಯಾವ ರೀತಿಯಲ್ಲಿ ಪೀಡಿಸಬಹುದು ಎನ್ನವುದೇ).
ಈಗಾಗಲೇ ಕೇಂದ್ರ ಸರ್ಕಾರ ಹಲವು ತಜ್ಞರು- ಪೇಟೆ ಪ್ರಪಂಚದ ತಜ್ಞರ ಜತೆ ವಿಚಾರ ವಿನಿಮಯ ನಡೆಸಿ, ಷೇರು - ಸೆಕ್ಯೂರಿಟಿಗಳಲ್ಲಿ ನ್ಯಾಯವಾದ ರೀತಿಯಲ್ಲಿ ವ್ಯವಹರಿಸುವವರಿಗೆ ಮೋಸ- ನಷ್ಟದ ವಿರುದ್ಧ ರಕ್ಷಣಾ ಕವಚದಂತಹ ವಿತ್ತೀಯ ಸಾಧನಗಳನ್ನು ರೂಪಿಸುವ ಚಿಂತನೆ ನಡೆಸಿದೆ.
ನಿಜ, ಷೇರುಗಳನ್ನು ಬ್ಯಾಂಕಿನ ಠೇವಣಿಗೆ ಹೋಲಿಸುವಂತಿಲ್ಲ. ಅದು ವ್ಯಾಪಾರಿ ಜಗತ್ತಿಗೆ ಸಂಬಂಧಿಸಿದ ವಿಚಾರ. ಆದರೂ ಅಮಾಯಕರಿಗೆ ಕನಿಷ್ಠ ಪ್ರಮಾಣದ ರಕ್ಷಣೆ ನೀಡಲು ನಡೆದಿರುವ ಪ್ರಯತ್ನ ಒಳ್ಳೆಯದು.
ಸಾಲದ ಹೊರೆ
ಇತ್ತೀಚೆಗೆ ತಜ್ಞರ ತಂಡದ ಅಧ್ಯಯನದಂತೆ, ದೇಶದ ಸಾಧಾರಣ ಕಾರ್ಪೋರೇಟ್ ವಲಯದ ಕಂಪನಿಗಳ ಲಾಭ, ಆ ಸಂಸ್ಥೆಗಳ ಸಾಲದ ಮೇಲಿನ ಬಡ್ಡಿಯ ಪಾವತಿಗೂ ಸಾಲದು ಎನ್ನುವ ಸ್ಥಿತಿಯಲ್ಲಿದೆ. ಸುಮಾರು 3700 ಕಂಪನಿಗಳ ಪ್ರಕಟಿತ ವ್ಯವಹಾರದ ವರದಿಗಳ ಆಧಾರದ ಮೇಲೆ ಈ ಅಭಿಪ್ರಾಯ ಪ್ರಕಟವಾಗಿದೆ. ಆ ಸಂಸ್ಥೆಗಳ ಒಟ್ಟು ಸಾಲದ ಹೊರೆ 40,000 ಕೋಟಿ ಡಾಲರ್‌ಗಳಷ್ಟು.
ಈ ಪರಿಸ್ಥಿತಿಗೆ ಕಳೆದ ಮೂರು ವರ್ಷಗಳ ಹಿಂಜರಿತವೇ ಕಾರಣವೆಂದೂ, ಈಗ ಪ್ರಗತಿಯ ಲಕ್ಷಣಗಳು ಕಂಡು ಬಂದಿರುವುದರಿಂದ ಇನ್ನೂ ಒಂದೆರಡು ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಬಹುದೆನ್ನುವ ಆಶಾವಾದವೂ ಪ್ರಕಟವಾಗಿದೆ. ಸಾಲ ತೀರುವಳಿಗೆ ಅನೇಕ ಕಂಪನಿಗಳು ಈಗ ಹೊಸ ಷೇರುಗಳ ಮಾರಾಟಕ್ಕೆ ಮುಂದಾದರೂ ಆಗಬಹುದು. ಅಂಥ ಸನ್ನಿವೇಶದಲ್ಲಿ ವೈಯಕ್ತಿಕ ವ್ಯವಹಾರಸ್ಥರು ಎಚ್ಚರಿಕೆಯಿಂದಿರುವುದು ಒಳಿತು.
ಕೊನೆಮಾತು
ಕಳೆದ ಎರಡು- ಮೂರು ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ, ಕಷ್ಟದ ದಿನಗಳು ಕಾದಿವೆ, ಜನ ಅದನ್ನು ಸಹಿಸಿಕೊಳ್ಳುವ ಶಕ್ತಿ ಪಡೆಯುವಂತೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಪರಿಶೀಲಿಸುತ್ತಿದೆ ಎಂದು ಕಠೋರ ವಾಸ್ತವ ಚಿತ್ರವನ್ನು ಬಿಡಿಸಿದ್ದಾರೆ.
ಆದರೆ ಪ್ರಧಾನಿಯ ಈ ಪ್ರಾಮಾಣಿಕ ಅನಿಸಿಕೆ, ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ, ಸರ್ಕಾರ ಸಿದ್ಧಪಡಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಓದಿದ ಭಾಷಣದಲ್ಲಿ ಪ್ರತಿಬಿಂಬಿತವಾಗಿಲ್ಲವೇಕೆ?
ಸಮಯದ ಪ್ರಶ್ನೆ, ಉತ್ತರಕ್ಕೆ ಬಜೆಟ್‌ವರೆಗೂ ಕಾಯಬೇಕು.
-ಸತ್ಯ