ಮುಂಬೈ: ದಿನಪೂರ್ತಿ ಹಾವು-ಏಣಿ ಆಟವಾಡುತ್ತಲೇ ಸಾಗಿದ್ದ ಮುಂಬೈ ಷೇರು ಮಾರುಕಟ್ಟೆಯ ಸೂಕ್ಷ್ಮ ಸಂವೇದಿ ಸೂಚ್ಯಂಕ 290.82 ಅಂಕಗಳ ಏರಿಕೆಯೊಂದಿಗೆ 26 ಸಾವಿರದ 32.38ರಲ್ಲಿ ತನ್ನ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 71.70 ಅಂಕಗಳ ಜಿಗಿತದೊಂದಿಗೆ 7,880.70 ಅಂಕಗಳ ಮಟ್ಟಕ್ಕೆ ಏರಿಕೆ ಕಂಡುಬಂದಿತು.
ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರು ಸೂಚ್ಯಂಕ ಅನುಕ್ರಮವಾಗಿ ಶೇ.1.2 ಮತ್ತು ಶೇ.0.3ರಷ್ಟು ಏರಿದವು. ಸುಮಾರು ಸಾವಿರದ 14 ಕಂಪೆನಿಗಳ ಷೇರು ದರ ಏರಿಕೆಯಾದರೆ ಸಾವಿರದ 596 ಷೇರುಗಳು ಇಳಿಕೆಯನ್ನು ಕಂಡವು. 103 ಷೇರುಗಳು ಯಾವುದೇ ಬದಲಾವಣೆಯಾಗದೆ ದಿನದ ವಹಿವಾಟನ್ನು ಮುಗಿಸಿದವು.ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಚೇತರಿಕೆ ಕಂಡುಬಂದಿದೆ.
ಚೇತರಿಕೆಗೆ ಕಾರಣವಾದ ಜಿಎಸ್ಟಿ: ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಮತ್ತೆ ಸಂಸತ್ ಅಧಿವೇಶನ ಕರೆಯಲು ಸರ್ಕಾರ ಪರಿಗಣಿಸುತ್ತದೆ ಎಂದು ಸರ್ಕಾರ ಘೋಷಿಸಿರುವುದು ಕೂಡ ಷೇರುಪೇಟೆ ಚೇತರಿಕೆಗೆ ಇಂದು ಮತ್ತೊಂದು ಕಾರಣವಾಗಿದೆ.
ಮೊನ್ನೆಯ ಸಂಸತ್ತು ಅಧಿವೇಶನದಲ್ಲಿ ತೀವ್ರ ಗದ್ದಲ, ಕೋಲಾಹಲವೆದ್ದ ಕಾರಣ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಮತ್ತೆ ಈಗ ಮರುಜೀವ ಸಿಗುವ ಸಾಧ್ಯತೆಯಿದೆ.