ಚೀನಾ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಇಳಿಕೆ ಪರಿಣಾಮ ಕಳೆದ ಎರಡು ವಾರಗಳಿಂದ ಏರಿಮುಖದಲ್ಲಿದ್ದ ಚಿನ್ನದ ದರಗಳು ಮಂಗಳವಾರ ತುಸು ನಷ್ಟ ಅನುಭವಿಸಿವೆ. ಚಿನ್ನದ ಬೇಡಿಕೆ ಇಳಿಮುಖ ಕಂಡಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ನಷ್ಟವಾಗಿದ್ದು ದೇಶೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು. ಇದರಿಂದ ಮಂಗಳವಾರ ಪ್ರತಿ ಹತ್ತು ಗ್ರಾಂ ಚಿನ್ನದ ದರ ರೂ.215 ಇಳಿಕೆ ಕಂಡು 27,360ಕ್ಕೆ ತಲುಪಿತು. ಚಿನ್ನದ ಹಾದಿಯಲ್ಲೇ ಸಾಗಿದ ಬೆಳ್ಳಿ ಕೆಜಿ ದರ ರೂ.800 ನಷ್ಟದೊಂದಿಗೆ ರೂ.35,500ಕ್ಕೆ ತಲುಪಿದೆ. ಕಳೆದ ಹದಿನಾಲ್ಕು ವಹಿವಾಟುಗಳಲ್ಲಿ ಚಿನ್ನದ ದರ ರೂ. 2,595 ಏರಿಕೆ ದಾಖಲಿಸಿತ್ತು. ಇದು ಈ ವರ್ಷದ ಅತಿ ದೀರ್ಘಾವಧಿ ಏರಿಕೆಯಾಗಿತ್ತು. ಇಲ್ಲಿನ ಚಿನಿವಾರ ಪೇಟೆಯಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ ಹತ್ತು ಗ್ರಾಂ ದರ ರೂ. 215 ಕುಸಿದು ರೂ. 27,360ಕ್ಕೆ ತಲುಪಿದೆ.
ಯೂರೋಪ್, ಅಮೆರಿಕದಲ್ಲಿ ಚೇತರಿಕೆ
ಲಂಡನ್ : ಕುಸಿಯುತ್ತಿರುವ ಆರ್ಥಿಕತೆಗೆ ವೇಗ ತುಂಬಲು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಮಂಗಳವಾರ ಬಡ್ಡಿದರಗಳನ್ನು ಕಡಿತಗೊಳಿಸಿತು. ಇದರಿಂದ ಮಧ್ಯಾವಧಿಯ ನಂತರ ಯೂರೋಪ್‍ನ ಮಾರುಕಟ್ಟೆಗಳು ಚೇತರಿಕೆ ಕಂಡವು. ಅಮೆರಿಕ ಷೇರು ಮಾರುಕಟ್ಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ದಾಖಲಾಯಿತು. ಜಗತ್ತಿನ ಎಲ್ಲ ಕರೆನ್ಸಿಗಳ ವಿರುದ್ಧ ಅಮೆರಿಕದ ಡಾಲರ್ ಶೇ.1.8ರವರೆಗೂ ಏರಿಕೆಕಂಡಿತು. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಬಡ್ಡಿದರಗಳನ್ನು ಕಡಿತಗೊಳಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕುಸಿಯುತ್ತಿರುವ ಆರ್ಥಿಕತೆ ಮತ್ತು ಷೇರುಪೇಟೆಯನ್ನು ತಡೆಯಲು ಚೀನಾ ಈ ವರ್ಷ ಹಲವು ಬಾರಿ ಮಧ್ಯಪ್ರವೇಶ ಮಾಡಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.