ನವದೆಹಲಿ: ದೇಶದ ಡಿಜಿಟಲ್ ವಾಣಿಜ್ಯ ಮಾರುಕಟ್ಟೆ 2017ರ ವೇಳೆಗೆ 12,800 ಕೋಟಿ ಡಾಲರ್ ಮುಟ್ಟಲಿದೆ ಎಂದು ಭಾರತೀಯ ಉದ್ಯಮ ಒಕ್ಕೂಟ ಅಸೋಚಾಮ್ ಮತ್ತು ಡೆಲಾಯ್ಟ್ ಅಧ್ಯಯನ ವರದಿ ಹೇಳಿದೆ.
ಸದ್ಯ ಭಾರತದ ಡಿಜಿಟಲ್ ವಾಣಿಜ್ಯ ಮಾರುಕಟ್ಟೆ ಪ್ರಮಾಣ 4,200 ಕೋಟಿ ಡಾಲರ್ ಗಳಷ್ಟಿದೆ. ಮೊಬೈಲ್ ಮತ್ತು ಇಂಟರ್‍ನೆಟ್ ಬಳಕೆ ಹೆಚ್ಚಳ, ಆನ್‍ಲೈನ್ ವಹಿವಾಟು ಏರಿಕೆ, ಮುಂದುವರೆದ ಪಾವತಿ ವ್ಯವಸ್ಥೆ, ಆಕರ್ಷಕ ರಿಯಾಯಿತಿಗಳು ಮತ್ತಿತರ ಕಾರಣಗಳಿಂದಾಗಿ ಡಿಜಿಟಲ್ ವಾಣಿಜ್ಯ ಗಣನೀಯ ಏರಿಕೆ ಕಾಣಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಹಾಗಿದ್ದರೂ ಸಾರಿಗೆ ವ್ಯವಸ್ಥೆ ತುಂಬಾ ಸಂಕೀರ್ಣವಾಗಿರುವುದರಿಂದ ತುಂಬಾ ಕಷ್ಟವಾಗಿದೆ.
ಭಾರತದಂತಹ ಬೃಹತ್ ಜನಸಂಖ್ಯೆಯುಳ್ಳ ದೇಶದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಅಗತ್ಯ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಎಲ್ಲರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ.