ಹೈದರಾಬಾದ್: ಭಾರತ ಹಾಗೂ ಅಮೆರಿಕ ಜಾಗತಿಕ ಬೆಳವಣಿಗೆಯ ಯಂತ್ರಗಳು ಎಂದು ವಿಶ್ವ ಬ್ಯಾಂಕ್ ನ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಹೇಳಿದ್ದಾರೆ.
ಜಡ ಜಾಗತಿಕ ಬೆಳವಣಿಗೆ ಮಧ್ಯೆಯೂ ಭಾರತ ಹಾಗೂ ಅಮೆರಿಕ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆ ಹೊಂದಿದ ರಾಷ್ಟ್ರಗಳಾಗಿವೆ ಎಂದು ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಭಾರತೀಯ ಆರ್ಥಿಕ ಸಂಘದ 98 ನೇ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಬೆಳವಣಿಗೆ ಜಡವಾಗುತ್ತಿದೆ, ವಿಶ್ವದ ಆರ್ಥಿಕತೆ ಕೇವಲ ಶೇ.2 ರಷ್ಟು ಮಾತ್ರ ಬೆಳವಣಿಗೆಯಾಗುವ ನಿರೀಕ್ಷೆ ಇದ್ದು ಆರ್ಥಿಕತೆ ಬಗ್ಗೆ ಸಮ್ಮೇಳನ ನಡೆಸುವುದಕ್ಕೆ ಇದು ನಿರ್ಣಾಯಕ ಸಮಯ ಎಂದಿದ್ದಾರೆ.
ರಷ್ಯಾದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದು ಅದರ ಜಿಡಿಪಿ ಶೇ.4 ರಷ್ಟು ಕುಸಿದಿದೆ. ಬ್ರಿಕ್ಸ್ ರಾಷ್ಟ್ರಗಳ ಪೈಕಿ ಭಾರತ- ಚೀನಾದ ಆರ್ಥಿಕತೆ ಮಾತ್ರ ಉತ್ತಮವಾಗಿದ್ದು ಅದೂ ಶೇ.7 ಕ್ಕಿಂತ ಕಡಿಮೆ ಇದೆ, ಈ ಹಂತದಲ್ಲಿ ಅತ್ಯಂತ ಶ್ರೀಮಂತ ಅರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಅಮೆರಿಕ ಹಾಗೂ ಬೆಳವಣಿಗೆಯಾಗುತ್ತಿರುವ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಮಾತ್ರ ನಿರೀಕ್ಷೆ ಮೂಡಿಸಿದ್ದು ಜಾಗತಿಕ ಬೆಳವಣಿಗೆಗೆ ಯಂತ್ರಗಳಾಗಿವೆ ಎಂದು ಹೇಳಿದ್ದಾರೆ.