ವಾಣಿಜ್ಯ

ಬ್ಯಾಂಕ್ ಅಧಿಕಾರಿಗಳ ಸೆರೆ

Srinivasamurthy VN

ನವದೆಹಲಿ: ಬ್ಯಾಂಕ್ ಆಫ್ ಬರೋಡಾದಿಂದ ಆರು ಸಾವಿರ ಕೋಟಿ ರು. ಕಪ್ಪು ಹಣವನ್ನು ಹಾಂಕಾಂಗ್‍ಗೆ ವರ್ಗಾಯಿಸುವ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತೀವ್ರಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಸಂಸ್ಥೆಗಳು ಸೋಮವಾರ ಬ್ಯಾಂಕ್‍ನ ಆರು ಅಧಿಕಾರಿಗಳನ್ನು ಬಂಧಿಸಿವೆ. ಈ ಪೈಕಿ ಜಾರಿ ನಿರ್ದೇಶನಾಲಯ ಇಬ್ಬರನ್ನು ಮತ್ತು ಸಿಬಿಐ ನಾಲ್ವರನ್ನು ಬಂಧಿಸಿದೆ. ಇಲ್ಲಿನ ಅಶೋಕ್ ವಿಹಾರ್ ಶಾಖೆಯ 59 ಖಾತೆಗಳಿಂದ ಹಾಂಕಾಂಗ್ ಮತ್ತು ದುಬೈನಲ್ಲಿರುವ ಕಂಪನಿಗಳಿಗೆ ಹಣ ವರ್ಗಾಯಿಸಲಾಗಿದೆ. ಆಮದು ವಹಿವಾಟಿಗೆ ಹಣವನ್ನು   ವರ್ಗಾಯಿಸಿರುವುದಾಗಿ ಹೇಳಿವೆ ಎಂದು ಪ್ರಕರಣವನ್ನು ತನಿಖೆ ನಡೆಸುತ್ತಿರುವ ಮೂಲಗಳು ತಿಳಿಸಿವೆ. ಹಣ ವರ್ಗಾಯಿಸಿರುವ ಖಾತೆ ತೆರೆಯಲು ಸುಳ್ಳು ವಿಳಾಸಗಳನ್ನು ನೀಡಿರುವುದು  ತಪಾಸಣೆಯಿಂದ ಬೆಳಕಿಗೆ ಬಂದಿದೆ. ಬ್ಯಾಂಕ್‍ನ ಕೆಲವು ಅಧಿಕಾರಿಗಳು ಈ ಕಂಪನಿಗಳಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬಂದಿದೆ.

ಇಲ್ಲಿನ ಶಾಖೆಯ ಮುಖ್ಯಸ್ಥರಾದ ಸುರೇಶ್ ಕುಮಾರ್ ಗಾರ್ಗ್ ಮತ್ತು ವಿದೇಶಿ ವಿನಿಮಯ ವಿಭಾಗದ ಮುಖ್ಯಸ್ಥ ಜೈನಿಸ್ ದುಬೆ ಸಿಬಿಐ ಬಂಧಿಸಿರುವ ಇಬ್ಬರು ಅಧಿಕಾರಿಗಳಾಗಿದ್ದಾರೆ. ಕಮಲ್  ಕಾಲ್ರ, ಚಂದನ್ ಭಾಟಿಯಾ, ಗುರುಚರಣ್ ಸಿಂಗ್ ಮತ್ತು ಸಂಜಯ್ ಅಗರ್ ವಾಲ್ ಜಾರಿ ನಿರ್ದೇಶನಾಲಯ ಬಂಧಿಸಿರುವ ನಾಲ್ವರು ಬ್ಯಾಂಕ್ ನೌಕರರಾಗಿದ್ದಾರೆ. ಈ ನಾಲ್ವರು 15 ಖಾತೆಗಳ  ಮೂಲಕ ಕಪ್ಪು ಹಣ ವರ್ಗಾವಣೆಯಲ್ಲಿ ಕೈಜೋಡಿಸಿದ್ದಾರೆ. ಕಮಲ್ ಕಾಲ್ರ ಡಜನ್‍ಗೂ ಹೆಚ್ಚು ಖಾತೆಗಳನ್ನು ನಿರ್ವಹಿಸಿದ್ದಾರೆ. ಕಾಲ್ರ ಎಚ್ ಡಿಎಫ್ ಸಿ ಬ್ಯಾಂಕ್‍ನ ವಿದೇಶಿ ವಿನಿಮಯ ವಿಭಾಗದಲ್ಲಿ  ಕಮೀಷನ್‍ಗಾಗಿ ಕೆಲಸ ಮಾಡುತ್ತಿದ್ದುದು ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ.

ಗುರುಚರಣ್ ಸಿಂಗ್ ಜೊತೆಗೆ ನಾನು ಕೆಲಸ ಮಾಡುತ್ತಿದ್ದೆ. ನಾವಿಬ್ಬರೂ ಸಿದ್ಧ ಉತ್ಪನ್ನಗಳನ್ನು ರಫು್ತ ಮಾಡುತ್ತಿದ್ದೆವು ಎಂದು ಭಾಟಿಯಾ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಬ್ಯಾಂಕ್‍ನಲ್ಲಿ  ಅವ್ಯವಹಾರ ನಡೆದಿರುವುದು ಪತ್ತೆಯಾದ ನಂತರ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಯಿತು ಎಂದು ಬ್ಯಾಂಕ್ ಆಫ್ ಬರೋಡಾದ ಕಾರ್ಯಕಾರಿ ನಿರ್ದೇಶಕ ಬಿ.ಬಿ.ಜೋಷಿ  ಹೇಳಿದ್ದಾರೆ. ಈ ವರ್ಗಾವಣೆ ವಹಿವಾಟು ಆಧರಿತವಾಗಿ ನಡೆದಿದ್ದು, ವರ್ತಕರು ಸೀಮಾ ಸುಂಕ, ತೆರಿಗೆಗಳನ್ನು ವಂಚಿಸಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ. ಜಾರಿ ನಿರ್ದೇಶನಾಲಯ  ಬಂಧಿಸಿರುವ ನಾಲ್ವರು ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಆಫ್ ಬರೋಡಾ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಲು ಪ್ರತಿ ಡಾಲರ್ ಗೆ 30 ರಿಂದ 50  ಪೈಸೆ ಕಮೀಷನ್ ಪಡೆಯುತ್ತಿದ್ದರು ಎಂದು ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದಾರೆ.

ಭಾರತದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆಗಳನ್ನು ತೆರೆಯುವಲ್ಲಿ ಭಾಟಿಯಾ ಪ್ರಮುಖ ವ್ಯಕ್ತಿಯಾಗಿದ್ದ. ಆ ಖಾತೆಗಳ ಮೂಲಕ ಹಾಂಕಾಂಗ್ ಮೂಲದ ಕಂಪನಿಗಳಿಗೆ ಹಣ  ವರ್ಗಾಯಿಸುತ್ತಿದ್ದ. ಇದಕ್ಕೆ ಧವನ್ ನೆರವಾಗುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಲಾಗುವುದು ಎಂದು ಸಿಬಿಐ ಮತ್ತು ಇಡಿ ಮೂಲಗಳು ತಿಳಿಸಿವೆ.

SCROLL FOR NEXT