ಆರ್ ಬಿಐ ಗೌರ್ನರ್ ರಘುರಾಂ ರಾಜನ್
ಮುಂಬೈ: ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಯಾಗಬೇಕು ಮತ್ತು ಬೇಡಿಕೆ ಹೆಚ್ಚಿಸದೆ ದೇಶದ ಆರ್ಥಿಕ ಪ್ರಗತಿ ಶೇ.9ರಷ್ಟು ತಲುಪಲು ಸಾಧ್ಯವಿಲ್ಲ ಎಂದು ಆರ್ ಬಿಐ ಗೌರ್ನರ್ ರಘುರಾಂ ರಾಜನ್ ಪ್ರತಿಪಾದಿಸಿದರು.
ಹಣದುಬ್ಬರ ಇಲ್ಲದೆ ದೇಶ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ಸಾಧ್ಯವಿಲ್ಲ ಎಂದ ಅವರು, ಸರಬರಾಜು ಕಡೆ ಇರುವ ಅಡ್ಡಿಗಳನ್ನು ನಿವಾರಿಸಬೇಕು. ಇದರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ ಎಂದಿದ್ದಾರೆ. ಶೇ.9ರಷ್ಟು ಪ್ರಗತಿ ಸಾಧಿಸುವುದು ಸುಸ್ಥಿರ ಹಾದಿಯಾಗಿದೆಯೇ ಹೊರತು ರಾತ್ರೋರಾತ್ರಿ ಬೆಳೆಯುವುದಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಖಾಸಗಿ ಸಂಶೋಧನಾ ಸಂಸ್ಥೆ ಗೇಟ್ ವೇ ಆಯೋಜಿಸಿದ್ದ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು. ಜಿ20 ಗುಂಪಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳು, ಜಿ20ನಂತಹ ಗುಂಪುಗಳಲ್ಲಿ ನಮ್ಮ ವಾದವನ್ನು ಯಶಸ್ವಿಯಾಗಿ ಮಂಡಿಸಲು ಬೇಕಾದಂತಹ ಒಳ್ಳೆಯ ಆರ್ಥಿಕ ತಜ್ಞರನ್ನು ಭಾರತ ಹೊಂದಿಲ್ಲ ಎಂದು ವಿಷಾದಿಸಿದ್ದಾರೆ.
ಜಿ20 ಗುಂಪಿನಲ್ಲಿ ಭಾರತ ಮತ್ತು ಕೆನಡ ಸಹ ಅಧ್ಯಕ್ಷ ದೇಶಗಳಾಗಿವೆ. ಕೆನಡ ಏಳು ಮಂದಿ ಉತ್ತಮ ಆರ್ಥಿಕ ತಜ್ಞರನ್ನು ಹೊಂದಿದ್ದು ತಮ್ಮ ಕಾರ್ಯಸೂಚಿಯನ್ನು ಇನ್ನಷ್ಟು ಮುಂದಕ್ಕೊಯ್ಯಲು ಯತ್ನಿಸುತ್ತಾರೆ. ಆದರೆ ನಾವು ಅಷ್ಟು ಆರ್ಥಿಕ ತಜ್ಞರನ್ನು ಹೊಂದಿಲ್ಲ ಎಂದು ಹೇಳಿದರು.