ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿರುವ ವಿತ್ತೀಯ ಕೊರತೆ ಅಂದಾಜಿ ನೊಳಗಿರುವ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಂಡವಾಳ ವಾಪಸಾತಿ ಗುರಿ ತಲುಪಲು ಹಲವು ಸವಾಲುಗಳು ಎದುರಾಗಿರುವ ನಡುವೆಯೂ ಇದು ಸಾಧ್ಯ ಎಂದಿದ್ದಾರೆ. ತಲುಪಲು ಸಾಧ್ಯವಿರುವ ಪ್ರಮಾಣದ ವಿತ್ತೀಯ ಕೊರತೆ ಗುರಿ ಹೊಂದಲಾಗಿದೆ.
ಪ್ರಸಕ್ತ ಹಣಕಾಸು ವರ್ಷ ಈ ಅಂದಾಜು ಶೇ.4 ರಿಂದ 3.9ರಷ್ಟು ಇರಬಹುದು ಎಂದು ಇಲ್ಲಿ ಏರ್ಪಡಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ಜೇಟ್ಲಿ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಕುಸಿತ ಬಂಡವಾಳ ವಾಪಸಾತಿ ಯೋಜನೆಗೆ ಅಡ್ಡಿಯಾಗಿದೆ. ಈ ವರ್ಷ ಲೋಹ ವಲಯದ ಕಂಪನಿಗಳಲ್ಲಿ ಬಂಡವಾಳ ವಾಪಸಾತಿ ಯೋಜನೆ ಹೊಂದಿದ್ದು ಲೋಹ ವಲಯದ ಷೇರುಗಳು ಕುಸಿದಿವೆ. ಹೀಗಾಗಿ ರು.69,500 ಕೋಟಿ ಬಂಡವಾಳ ವಾಪಸಾತಿ ಗುರಿ ತಲುಪುವ ಸಾಧ್ಯತೆಗಳು ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದರ ನಡುವೆಯೂ ವಿತ್ತೀಯ ಕೊರತೆ ಮಿತಿಯಲ್ಲಿರಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ.