ವಿದೇಶಗಳಲ್ಲಿರುವ ವಿಜಯ್ ಮಲ್ಯ ಆಸ್ತಿ ಕೇವಲ 780 ಕೋಟಿಯಂತೆ!
ಸಾಲದ ದೊರೆ ವಿಜಯ್ ಮಲ್ಯ ಅವರು ತಾನು ಮತ್ತು ತನ್ನ ಕುಟುಂಬ ವಿದೇಶಗಳಲ್ಲಿ ಕೇವಲ 780 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು...
ನವದೆಹಲಿ: ಸಾಲದ ದೊರೆ ವಿಜಯ್ ಮಲ್ಯ ಅವರು ತಾನು ಮತ್ತು ತನ್ನ ಕುಟುಂಬ ವಿದೇಶಗಳಲ್ಲಿ ಕೇವಲ 780 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಬ್ಯಾಂಕುಗಳ ಕೋರಿಕೆ ಹಿನ್ನೆಲೆಯಲ್ಲಿ ಏ.21ರ ಗುರುವಾರದೊಳಗೆ ನಿಮ್ಮ ಎಲ್ಲ ಆಸ್ತಿ ವಿವರ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಮದ್ಯ ದೊರೆ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಮಲ್ಯ ಅವರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಲ್ಯ, 'ನಾನೊಬ್ಬ ಎನ್ಆರ್ಐ. ಹೀಗಾಗಿ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಬೇಕಾಗಿಲ್ಲ. ನನ್ನ ಮೂವರು ಮಕ್ಕಳು ಹಾಗೂ ಪತ್ನಿ ಎಲ್ಲರೂ ಅಮೆರಿಕ ಪ್ರಜೆಗಳು. ಹೀಗಾಗಿ ಅವರು ಕೂಡ ಆಸ್ತಿ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.
ಅಲ್ಲದೆ ತಮಗೆ ಬ್ಯಾಂಕುಗಳು ಸಾಲ ಮಂಜೂರು ಮಾಡುವಾಗ ನಾನು ವಿದೇಶದಲ್ಲಿ ಹೊಂದಿರುವ ಆಸ್ತಿಯನ್ನೇನು ಪರಿಗಣಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ, ಕರ್ನಾಟಕ ಹೈಕೋರ್ಟ್ ಜಪ್ತಿ ಮಾಡಿರುವ 1398 ಕೋಟಿ ರುಪಾಯಿ ಹಣವನ್ನು ಪಾವತಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.
ವಿಜಯ್ ಮಲ್ಯ ಅವರು ಒಟ್ಟು 17 ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದಿದ್ದು, ಸಾಲ ಮರುಪಾವತಿಸದೇ ಈಗ ವಿದೇಶಕ್ಕೆ ಪರಾರಿಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.