ಮುಂಬೈ: ಕಡಿಮೆ ದರದ ವಿಮಾನಯಾನ ಸಂಸ್ಥೆ ಜೆಟ್ ಲೈಟ್ ಅನ್ನು ಮೂಲ ಸಂಸ್ಥೆ ಜೆಟ್ ಏರ್ವೇಸ್ ಜೊತೆಗೆ ವಿಲೀನಗೊಳಿಸಲು ಶೇರುದಾರರು ಒಪ್ಪಿಗೆ ನೀಡಿದ್ದಾರೆ ಎಂದು ಶನಿವಾರ ಜೆಟ್ ಏರ್ವೇಸ್ ತಿಳಿಸಿದೆ.
"ಸಭೆಯಲ್ಲಿ ಸಂಸ್ಥೆಯ ಶೇರುದಾರರು ಜೆಟ್ ಲೈಟ್ (ಇಂಡಿಯಾ) ಮತ್ತು ಜೆಟ್ ಏರ್ವೇಸ್ (ಇಂಡಿಯಾ) ವಿಲೀನಗೊಳಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ" ಎಂದು ಬಿ ಎಸ್ ಇ ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಈ ಸಭೆ ಶುಕ್ರವಾರ ನಡೆದಿತ್ತು.
ಈ ಹಿಂದೆ ಜೆಟ್ ಏರ್ವೇಸ್, ಸಹರಾ ಏರ್ಲೈನ್ಸ್ ಸಂಸ್ಥೆಯನ್ನು ೧೪೫೦ ಕೋಟಿಗೆ ಕೊಂಡು ಜೆಟ್ ಲೈಟ್ ಎಂದು ಮರುನಾಮಕರಣ ಮಾಡಿತ್ತು. ಈಗ ಈ ಕಡಿಮೆ ದರದ ವಿಮಾನಯಾನ ಸಂಸ್ಥೆ ತಾಯಿ ಸಂಸ್ಥೆಯ ಜೊತೆಗೆ ವಿಲೀನವಾಗಲಿದೆ.
ಈ ವಿಲೀನಕ್ಕೆ ಸೆಪ್ಟಂಬರ್ ನಲ್ಲೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಮತ್ತು ಸಂಸ್ಥೆ ಕೋರ್ಟ್ ನಿಂದ ಸೂಚನೆಯನ್ನು ಕೋರಿತ್ತು. ಏಪ್ರಿಲ್ ೨೨ ರಂದು ಶೇರುದಾರರ ಸಭೆ ಕರೆದು ವಿಲೀನವನ್ನು ಚರ್ಚಿಸುವಂತೆ ಹೈಕೋರ್ಟ್ ಸೂಚಿಸಿತ್ತು.