ಮುಂಬೈಯಲ್ಲಿ ಇಂದು ಎರಡನೇ ತ್ರೈ ಮಾಸಿಕ ಹಣಕಾಸು ನೀತಿ ಪ್ರಕಟಿಸಿದ ಆರ್ ಬಿಐ ಗವರ್ನರ್ ರಘುರಾಮ್ ರಾಜನ್
ಮುಂಬೈ: ತಮ್ಮ ಇಷ್ಟು ವರ್ಷದ ಅಧಿಕಾರಾವಧಿ ಅದ್ಭುತವಾಗಿತ್ತು ಎಂದು ಬಣ್ಣಿಸಿರುವ ನಿರ್ಗಮಿತ ಆರ್ ಬಿಐ ಗವರ್ನರ್ ರಘುರಾಮ್ ರಾಜನ್, ಟೀಕಾಕಾರರ ಕ್ಷಿಪ್ರ ತೀರ್ಪಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾವು ಉಪಯುಕ್ತ ಕೊಡುಗೆ ನೀಡಿದ್ದು, ಅದರ ಫಲಿತಾಂಶ ಮುಂದಿನ 5-6 ವರ್ಷಗಳಲ್ಲಿ ಕಾಣಿಸಲಿದೆ ಎಂದರು.
ತಮ್ಮ ವಿರುದ್ದ ಟೀಕಿಸಿದವರ ಬಗ್ಗೆ ತಲೆಕೆಡಿಸಿಕೊಳ್ಳದ ಅವರು, ಕೆಲವರು ತಾನು ವಿಮಾನದಲ್ಲಿ ಕುಳಿತಿದ್ದಾಗಲೂ ಹೆಸರು ಬರೆಯದೆ ಧನ್ಯವಾದ ನೋಟ್ ಬರೆದು ಕಳುಹಿಸಿದ್ದಾರೆ ಎಂದರು.
ಟೀಕಿಸುವವರು ಅಥವಾ ಬೆಂಬಲಿಗರ ಕ್ಷಿಪ್ರ ತೀರ್ಮಾನ ಮುಖ್ಯವಾಗುವುದಿಲ್ಲ. ದೇಶದ ಸ್ಥಿರ ಮತ್ತು ಬಲಿಷ್ಠ ಬೆಳವಣಿಗೆಗೆ, ಉದ್ಯೋಗ ಸೃಷ್ಟಿಗೆ, ಮಧ್ಯಮ ವರ್ಗದ ಆದಾಯಕ್ಕೆ ಹೊರಳುವುದಕ್ಕೆ ಇದು ಹೇಗೆ ದೀರ್ಘಾವಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ ಎಂದು ರಘುರಾಮ್ ರಾಜನ್ ಇಂದು ಮುಂಬೈಯಲ್ಲಿ ಹೇಳಿದರು.
ಅವರು ಇಂದು ತಮ್ಮ ಕೊನೆಯ ಮೂರು ತಿಂಗಳ ವಿತ್ತೀಯ ನೀತಿಯನ್ನು ಪ್ರಕಟಿಸಿದರು. ನನ್ನ ಅಧಿಕಾರಾವಧಿಯಲ್ಲಿ ಆರ್ ಬಿಐಯಲ್ಲಿ ತೆಗೆದುಕೊಂಡ ತೀರ್ಮಾನಗಳು ಆಯಾ ಕಾಲಕ್ಕೆ ಹೊಂದಿಕೊಂಡು ಅದು ಸೂಕ್ತವಾಗಿತ್ತು ಮತ್ತು ಅನಿವಾರ್ಯವಾಗಿತ್ತು ಎಂದರು.
ಜನರು ಬೇರೆ ಬೇರೆ ರೀತಿಯಲ್ಲಿ ತೀರ್ಮಾನಿಸಬಹುದು, ಆದರೆ ಆಹಾರದಲ್ಲಿ ತಿನ್ನಲು ಸಿಗುವುದೆಷ್ಟು, ಕಸ, ಜಳ್ಳು ಎಷ್ಟು ಎಂದು ನಮಗೆ ಗೊತ್ತಿರುತ್ತದೆ. ಇನ್ನು 5-6 ವರ್ಷ ಕಳೆದ ನಂತರ ಆರ್ಥಿಕ ನೀತಿ ಉತ್ತಮವಾಗಿತ್ತೆ, ಕೆಟ್ಟದಾಗಿತ್ತೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.
ಕೆಲವರಿಗೆ ನನ್ನ ಕೆಲಸ ಇಷ್ಟವಾಗಿ ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿದವರಿದ್ದಾರೆ. ದಿನದ ಕೊನೆಗೆ ನೀವು ಮಾಡಿರುವ ಕೆಲಸ ಜನಕ್ಕೆ ಉಪಯೋಗವಾಗಿದೆ ಎಂದೆನಿಸಿದರೆ ಸಾಕು. ಆಗ ಕೆಲಸ ಅದ್ಭುತ ಎನಿಸುತ್ತದೆ. ನಾನು ನನ್ನ ಉದ್ಯೋಗದ ಪ್ರತಿ ಕ್ಷಣವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ ಎಂದರು.
ಪ್ರಸ್ತುತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ಶೇಕಡಾ 7.6ರಷ್ಟಾಗಿದ್ದು, ದೇಶದ ಆರ್ಥಿಕ ಸುಧಾರಣೆಗೆ ರಾಜಕೀಯ ಸಹಮತ ಬೆಳೆಯಲು ಸರಕು ಮತ್ತು ಸೇವಾ ತೆರಿಗೆ ಮಸೂದೆ ಉತ್ತಮ ಹೆಜ್ಜೆ ಎಂದು ಹೇಳಿದರು.
ಗವರ್ನರ್ ಹುದ್ದೆಯಿಂದ ನಿರ್ಗಮಿಸಿದ ನಂತರ ಮುಂದಿನ ಯೋಜನೆಯನ್ನು ಇನ್ನೂ ನಿರ್ಧರಿಸಿಲ್ಲ ಎಂದರು. ರಘುರಾಮ್ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 4ರಂದು ಕೊನೆಯಾಗಲಿದೆ.
ಭಾರತದ ಆರ್ಥಿಕತೆಯನ್ನು ನಾಶಪಡಿಸುವಂತೆ ರಾಜನ್ ಬಡ್ಡಿದರವನ್ನು ಹೆಚ್ಚಿನ ಪ್ರಮಾಣದಲ್ಲಿ ಇಟ್ಟಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos