ಫ್ರೀಡಂ 251 ಸ್ಮಾರ್ಟ್‌ಫೋನ್
ನವದೆಹಲಿ: ಫ್ರೀಡಂ 251 ಸ್ಮಾರ್ಟ್‌ಫೋನ್‌ನ್ನು ಪರಿಚಯಿಸುತ್ತಿರುವ ರಿಂಗಿಂಗ್ ಬೆಲ್ಸ್ ಕಂಪನಿ ವಿರುದ್ಧ ವಂಚನೆ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ರಿಂಗಿಂಗ್ ಬೆಲ್ಸ್ ಕಂಪನಿ ತಮ್ಮ ತಮ್ಮ ಕಸ್ಟಮರ್ ಸರ್ವೀಸ್ ಪ್ರೊವೈಡರ್‌ಗಳಿಗೆ ಸರಿಯಾಗಿ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸೈಫ್ಯೂಚರ್ ಎಂಬ ಬಿಪಿಒ ಕಂಪನಿ ರಿಂಗಿಂಗ್ ಬೆಲ್ಸ್ ವಿರುದ್ಧ ಈ ಆರೋಪ ಮಾಡಿದೆ. ಆದರೆ ಸೈಫ್ಯೂಚರ್, ಗ್ರಾಹಕರ ಕರೆಯ ಟ್ರಾಫಿಕ್ ನಿಯಂತ್ರಿಸಲು ವಿಫಲವಾಗಿತ್ತು ಎಂದು ರಿಂಗಿಂಗ್ ಬೆಲ್ಸ್ ದೂರಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೈಫ್ಯೂಚರ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅನುಜ್ ಬೈರತಿ, ನಮಗೆ ರಿಂಗಿಂಗ್ ಬೆಲ್ಸ್ ಕಂಪನಿ ಮತ್ತು ಅವರ ವ್ಯವಹಾರಗಳ ಬಗ್ಗೆ ಸದಾ ಸಂದೇಹವಿದೆ ಎಂದಿದ್ದಾರೆ.
ರಿಂಗಿಂಗ್ ಬೆಲ್ಸ್ ಕಂಪನಿಯ ಮ್ಯಾನೇಜ್‌ಮೆಂಟ್ ಟೀಂ ಜತೆ ಹಲವಾರು ಸುತ್ತಿನ ಮಾತುಕತೆಯ ನಂತರ ಅವರ ಪ್ರಾಜೆಕ್ಟ್ ಉದ್ಘಾಟನೆಗೆ ಹಿರಿಯ ರಾಜಕಾರಣಿಗಳು ಬರುತ್ತಾರೆ ಎಂದು ಅವರ ಹೆಸರುಗಳ ಪಟ್ಟಿಯನ್ನು ತೋರಿಸಿದ ನಂತರವೇ ನಾವು ಆ ಪ್ರಾಜೆಕ್ಟ್‌ನ್ನು ಕೈಗೆತ್ತಿಕೊಂಡಿದ್ದೆವು.
ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದ ಕೆಲವೇ ದಿನಗಳಲ್ಲಿ ಕಾಲ್ ಸೆಂಟರ್‌ಗೆ ಲಕ್ಷಗಟ್ಟಲೆ ಕರೆಗಳು ಬಂದಿದ್ದವು. ಈ ಕರೆಗಳಿಗೆಲ್ಲಾ ನಾವು ಉತ್ತರಿಸಿದ್ದೆವು. ನಮ್ಮ ಸೇವೆಗೆ ರಿಂಗಿಂಗ್ ಬೆಲ್ಸ್ ಕೂಡಾ ಸಂತೋಷ ವ್ಯಕ್ತ ಪಡಿಸಿತ್ತು
ಆದಾಗ್ಯೂ,ನಾವು ನಮಗೆ ನೀಡಬೇಕಾಗಿದ್ದ ಹಣದ ಬಗ್ಗೆ ಕೇಳಿದಾಗ ಅವರು ಸುಳ್ಳು ಆರೋಪಗಳನ್ನು ಹೊರಿಸಿ, ನಮ್ಮ ಸೇವೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಗುಡ್ ಬೈ ಹೇಳಿದ್ದರು.
ಒಪ್ಪಂದದ ಪ್ರಕಾರ ರಿಂಗಿಂಗ್ ಬೆಲ್ಸ್ 1 ವರ್ಷದ ಕಾಲ ನಮ್ಮ ಸೇವೆಯನ್ನು ಬಳಸಬೇಕಿತ್ತು. ಮಾತ್ರವಲ್ಲದೆ ಅದಕ್ಕಿಂತ ಮುಂಚೆ ಸೇವೆಯನ್ನು ಸ್ಥಗಿತಗೊಳಿಸುವಂತಿಲ್ಲ. ಆದರೆ ಪ್ರಸ್ತುತ ಕಂಂಪನಿ ಈ ಎಲ್ಲ ಒಪ್ಪಂದವನ್ನು ತಳ್ಳಿ ಹಾಕುವ ಮೂಲಕ ಮೋಸ ಮಾಡಿತ್ತು ಎಂದು ಬೈರತಿ ಹೇಳಿದ್ದಾರೆ.
ಇತ್ತ ರಿಂಗಿಂಗ್ ಬೆಲ್ಸ್ ಹೇಳುವ ಕತೆಯೇ ಬೇರೆ. ಗ್ರಾಹಕರು ಮಾಹಿತಿ ಪಡೆಯುವುದಕ್ಕೋಸ್ಕರ ಕಾಲ್ ಸೆಂಟರ್‌ಗೆ ಕರೆ ಮಾಡುತ್ತಲೇ ಇರುತ್ತಾರೆ. ಆದರೆ ಸೈಫ್ಯೂಚರ್ ಕಂಪನಿ ಈ ಕರೆಗಳನ್ನು ಸರಿಯಾಗಿ ನಿಭಾಯಿಸಿಲ್ಲ, ಆದ್ದರಿಂದಲೇ ನಾವು ಅವರ ಸೇವೆಯನ್ನು ಕೈ ಬಿಟ್ಟೆವು ಎಂದು ರಿಂಗಿಂಗ್ ಬೆಲ್ಸ್ ಅಧ್ಯಕ್ಷ ಅಶೋಕತ್ ಚಡ್ಡಾ ಹೇಳಿದ್ದಾರೆ.
ರಿಂಗಿಂಗ್ ಬೆಲ್ಸ್ ಕಂಪನಿ ಕರೆಗಳನ್ನು ಅವರು ಸ್ವೀಕರಿಸುವುದೇ ಇಲ್ಲ. ಆ ಬಗ್ಗೆ ನಾವು ಪೊಲೀಸರಲ್ಲಿ ಮಾತನಾಡಿ ಕೇಸು ದಾಖಲಿಸಲು ತೀರ್ಮಾನಿಸಿದ್ದೇವೆ. ರಿಂಗಿಂಗ್ ಬೆಲ್ಸ್ ಪ್ರಾಜೆಕ್ಟ್‌ಗಾಗಿ ನೇಮಕ ಮಾಡಿದ್ದ ನಮ್ಮ ಕಂಪನಿಯ 100 ನೌಕರರನ್ನು ವಜಾಗೊಳಿಸಿದರೆ ಇದು ಭಾರೀ ಪರಿಣಾಮವನ್ನುಂಟು ಮಾಡುತ್ತದೆ. ಈ ಪ್ರಕರಣದ ಬಗ್ಗೆ ನಾವು ಕಾನೂನು ರೀತಿಯಲ್ಲೇ ಹೋರಾಟ ಮಾಡುತ್ತೇವೆ ಎಂದು ಬೈರತಿ ಹೇಳಿದ್ದಾರೆ.