ನವದೆಹಲಿ: ಆನ್‍ಲೈನ್ ವಾಣಿಜ್ಯ ಕಂಪನಿ ಫ್ಲಿಪ್‍ಕಾರ್ಟ್ ಆಡಳಿತ ನಿರ್ವಹಣೆಯಲ್ಲಿ ಬದಲಾವಣೆ ತಂದಿದೆ. ಇದುವರೆಗೂ ಮುಖ್ಯ ಕಾರ್ಯಾಚರಣೆ ಅಧಿಕಾರಿ ಯಾಗಿದ್ದ ಬಿನ್ನಿ ಬನ್ಸಾಲ್‍ರನ್ನು ಸಿಇಒ ಹುದ್ದೆಗೆ ಏರಿಸಲಾಗಿದೆ.
ಕಂಪನಿ ಸಿಇಒ ಆಗಿದ್ದ ಸಚಿನ್ ಬನ್ಸಾಲ್‍ರಿಗೆ ಕಾರ್ಯಕಾರಿ ಚೇರ್ಮನ್ ಜವಾಬ್ದಾರಿ ವಹಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ಯಕಾರಿ ಚೇರ್ಮನ್ ಹುದ್ದೆಯಲ್ಲಿ ಸಚಿನ್ ಬನ್ಸಾಲ್ ಕಾರ್ಯತಂತ್ರ ನಿರ್ದೇಶನ, ಹಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವುದು ಮತ್ತು ಹೊಸ ಹೂಡಿಕೆ ಅವಕಾಶಗಳತ್ತ ನೋಟ ಹರಿಸಲಿದ್ದಾರೆ.
ಬಿನ್ನಿ ಸಿಇಒ ಹುದ್ದೆಯಲ್ಲಿ ಕಂಪನಿಯ ವಹಿವಾಟು ನೋಡಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕಂಪನಿಯ ಎಲ್ಲ ಪ್ರಗತಿಯ ಹೊಣೆ ವಹಿಸಲಿದ್ದಾರೆ.