ನವದೆಹಲಿ: ಏರಿ ಇಂಡಿಯಾ ಬುಕ್ಕಿಂಗ್ಸ್ ತುಂಬಾ ಕಳಪೆಯಾಗಿದೆ ಎಂದು ಸ್ವತಃ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಗುರುವಾರ ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ಸರ್ಕಾರ ಇದನ್ನು ಮಾರಾಟ ಮಾಡಲು ಮುಂದಾದರೆ ಯಾರೂ ಇದನ್ನು ಖರೀದಿಸಲ್ಲ ಎಂದಿದ್ದಾರೆ.
ಸುಮಾರು 50 ಸಾವಿರ ಕೋಟಿ ರುಪಾಯಿ ಸಾಲ ಹೊಂದಿರುವ ಏರ್ ಇಂಡಿಯಾದಿಂದ ಹೂಡಿಕೆಯನ್ನು ಹಿಂಪಡೆಯುವ ಸಾಧ್ಯತೆ ತಳ್ಳಿಹಾಕಿದ ಸಚಿವರು, ತೆರಿಗೆದಾರರ ಹಣವನ್ನು ಶಾಶ್ವತವಾಗಿ ಬಳಸಿಕೊಳ್ಳಲು ಬರುವುದಿಲ್ಲ ಎಂದಿದ್ದಾರೆ.
ಏರ್ ಇಂಡಿಯಾ ಬುಕ್ಕಿಂಗ್ ತುಂಬಾ ಕೆಟ್ಟದ್ದಾಗಿದೆ. ಹಲವು ಕೊಡುಗೆಗಳನ್ನು ನೀಡಿದರೂ ಜನ ಟಿಕೆಟ್ ಖರೀದಿಸಲು ಮುಂದೆ ಬರುತ್ತಿಲ್ಲ. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ನೊಂದಿಗೆ ವಿಲೀನಗೊಳಿಸಿದ ನಂತರ 2007ರಲ್ಲಿ ಯುಪಿಎ ಸರ್ಕಾರ 30 ಸಾವಿರ ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ನೀಡಿದರೂ ಏರ್ ಇಂಡಿಯಾ ಕಠಿಣ ಪರಿಸ್ಥಿತಿಯಿಂದ ಹೊರ ಬಂದಿಲ್ಲ ಎಂದರು.
ಇದೊಂದು ಉತ್ತಮ ಏರ್ ಲೈನ್. ಇದನ್ನು ನಾನು ಇಷ್ಟಪಡುತ್ತೇನೆ. ಆದರೆ ಶಾಶ್ವತವಾಗಿ ತೆರಿಗೆದಾರರ ಹಣ ವ್ಯಯ ಮಾಡಲು ನಾನು ಬದ್ಧನಾಗಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗಜಪತಿ ರಾಜು ಹೇಳಿದ್ದಾರೆ.