ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿದೆ.
ರಘುರಾಮ್ ರಾಜನ್ ಅವರ ಅವಧಿ ಮುಂದಿನ ಸೆಪ್ಟೆಂಬರ್ ಗೆ ಕೊನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ನೂತನ ಗವರ್ನರ್ ನೇಮಕಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಪರಸ್ಪರ ಸಹಮತದ ಮೂಲಕ ಸಮಿತಿಯನ್ನು ರಚಿಸಿದ್ದಾರೆ.
ಈ ಮೊದಲು ವಿಮೆ, ಪಿಂಚಣಿ, ಸೆಬಿ ಮೊದಲಾದ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಆಯ್ಕೆಗೆ ಸಮಿತಿಯನ್ನು ರಚಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಗವರ್ನರ್ ಹುದ್ದೆಗೆ ನೇಮಕಾತಿ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗಿದೆ.
ಆಯ್ಕೆ ಸಮಿತಿಯು ಗವರ್ನರ್ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡಿ ಪ್ರಧಾನಿಯವರ ನೇತೃತ್ವದ ಸಂಪುಟ ಮಂಡಳಿಗೆ ಕಳುಹಿಸಲಿದೆ. ದೇಶದ ಬಹುಪಾಲು ಜನರು ರಘುರಾಮ್ ರಾಜನ್ ಅವರೇ ಎರಡನೇ ಅವಧಿಗೂ ಗವರ್ನರ್ ಆಗಬೇಕೆಂದು ಒತ್ತಾಯಿಸುತ್ತಿದ್ದು, ಸರ್ಕಾರ ಯಾರನ್ನು ನೇಮಕ ಮಾಡುತ್ತದೆ ಎಂಬ ಕುತೂಹಲವಿದೆ.