ವಾಣಿಜ್ಯ

ಕಪ್ಪು ಹಣದ ದಾಖಲೆಗಳನ್ನು ಪಡೆಯಲು ಭಾರತ-ಸ್ವಿಡ್ಜರ್ಲೆಂಡ್ ದ್ವಿಪಕ್ಷೀಯ ಒಪ್ಪಂದ

Sumana Upadhyaya

ನವದೆಹಲಿ: ಕಪ್ಪು ಹಣದ ವಿರುದ್ಧ ಹೋರಾಡಲು ಪರಸ್ಪರ ಸಹಕಾರವನ್ನು ವಿಸ್ತರಿಸಲು ಸ್ವಿಡ್ಜರ್ಲೆಂಡ್ ನ ಉನ್ನತ ಮಟ್ಟದ ನಿಯೋಗವೊಂದು ನಿನ್ನೆ ದೆಹಲಿಯಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿತು. ಮಾತುಕತೆ ವೇಳೆ ವಿಸ್ತಾರವಾಗಿ ದ್ವಿಪಕ್ಷೀಯ ಮತ್ತು ಬಹು ಹಂತದ ತೆರಿಗೆ ಮತ್ತು ಹಣಕಾಸು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಕಪ್ಪು ಹಣದ ವಿರುದ್ಧ ತನಿಖೆ ತ್ವರಿತಗೊಳಿಸಲು ಭಾರತದ ತಂಡವೊಂದು ಸದ್ಯದಲ್ಲಿಯೇ ಸ್ವಿಡ್ಜರ್ಲೆಂಡ್ ಗೆ ಭೇಟಿ ನೀಡಲಿದೆ.

ಹಣಕಾಸು ಇಲಾಖೆ ಹೊರಡಿಸಿರುವ ಪ್ರಕಟಣೆ ಪ್ರಕಾರ, ಕಪ್ಪು ಹಣದ ವಹಿವಾಟುಗಳನ್ನು ತಡೆಗಟ್ಟಲು 2018ರಿಂದ ಎರಡೂ ದೇಶಗಳು ಮಾಹಿತಿಗಳ ಸ್ವಯಂಚಾಲಿತ ವಿನಿಮಯಕ್ಕೆ ಸಂಬಂಧಪಟ್ಟಂತೆ ಒಪ್ಪಂದಕ್ಕೆ ಸಹಿ ಹಾಕಲಿವೆ.

ಸ್ವಯಂಚಾಲಿತ ಮಾಹಿತಿ ವಿನಿಮಯ ಜಾರಿ ಆರಂಭಕ್ಕೆ ಸ್ವಿಡ್ಜರ್ಲೆಂಡ್ ಅಗತ್ಯ ಕಾನೂನು ಮೂಲವಾಗಲಿದೆ ಎಂದು ಸಭೆಯ ನಂತರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅದಿಯಾ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಸ್ವಿಡ್ಜರ್ಲೆಂಡಿನ ಅಂತಾರಾಷ್ಟ್ರೀಯ ಹಣಕಾಸು ವಿಷಯಗಳ ರಾಜ್ಯ ಕಾರ್ಯದರ್ಶಿ ಜಾಕ್ಸ್ ಡಿ ವಟ್ಟೆವಿಲ್ಲೆ ತಿಳಿಸಿದ್ದಾರೆ.

ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ ಭಾರತದ ನಾಗರಿಕರು ಸ್ವಿಡ್ಜರ್ಲೆಂಡ್ ನಲ್ಲಿ ಹೊಂದಿರುವ ಖಾತೆಗಳ ಬಗ್ಗೆ ಸ್ವಯಂಚಾಲಿತವಾಗಿ ಹಣಕಾಸು ಮಾಹಿತಿಗಳು ಬರಲಿವೆ.

SCROLL FOR NEXT