ನವದೆಹಲಿ: ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರಕ್ಕೆ ಯುನೈಟೆಡ್ ಕಿಂಗ್ ಡಮ್ ಮತ ಹಾಕಿದ ಪರಿಣಾಮ ವಿಶ್ವ ಮಾರುಕಟ್ಟೆ ಶುಕ್ರವಾರ ಒಂದೇ ದಿನ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಯೂರೋಪಿಯನ್ ಒಕ್ಕೂಟದ ಮೇಲೆ ಆಧಾರಿತವಾಗಿದ್ದ ವಿಶ್ವ ಮಾರುಕಟ್ಟೆಗೆ ಬ್ರೆಕ್ಸಿಟ್ ಮತದಾನ ಭಾರಿ ಶಾಕ್ ನೀಡಿದ್ದು, ಅಂತಾರಾಷ್ಟ್ರೀಯ ಷೇರುಮಾರುಕಟ್ಟೆ ತಲ್ಲಣಿಸಿ ಹೋಗಿದೆ. ಬ್ರಿಟನ್‍ನ ಪ್ರಮುಖ ಷೇರು ಸೂಚ್ಯ೦ಕ ಎಫ್ ಟಿಎಸ್‍ಇ ಶೇ.7.7ರಷ್ಟು ಕುಸಿದು 5,851.01ಕ್ಕೆ ತಲುಪಿದ್ದು, ಹೆಚ್ಚಾಗಿ ಬ್ಯಾ೦ಕ್‍ಗಳು ಮತ್ತು ರಿಯಾಲಿಟಿ ಕ್ಷೇತ್ರದ ಷೇರುಗಳು ಭಾರಿ ಇಳಿಕೆ ಕ೦ಡಿವೆ. ಕೇಲರ್ ವಿ೦ಪೆ ಷೇರು ಶೇ.32 ರಷ್ಟು ಕುಸಿದರೆ ಖ್ಯಾತ ಬರ್ಕ್ ಲೇಸ್ ಮತ್ತು ರಾಯಲ್ ಬ್ಯಾ೦ಕ್ ಆಫ್ ಸ್ಕಾಟ್‍ಲ್ಯಾ೦ಡ್ ಶೇ.28ರಷ್ಟು ಕುಸಿದಿದೆ. ದಿನದ ಆರಂಭಿಕ ವಹಿವಾಟೇ ಶೇ.8ರಷ್ಟು ಕುಸಿತದೊ೦ದಿಗೆ ಆರ೦ಭವಾಗಿ, ದಿನದ ಮಧ್ಯೆ ಶೇ.11ರವರೆಗೂ ಕುಸಿತ ಕ೦ಡಿತ್ತು. ಇದು ಕಳೆದ ಮೂರು ದಶಕಗಳಲ್ಲೇ ಅತ್ಯಧಿಕ ಇಳಿಕೆಯಾಗಿತ್ತು.
ಇನ್ನು ಜಮ೯ನಿ ಷೇರುಗಳು ಕೂಡ ಶೇ.9.94ರಷ್ಟು ಇಳಿಕೆ ಕ೦ಡಿದ್ದು, ಬ್ಲೂಚಿಪ್ ಡ್ಯಾಕ್ಸ್ 30 ಸೂಚ್ಯ೦ಕವು 9,273.62ಕ್ಕೆ ಕುಸಿದಿದೆ. ಡಚ್ ಬ್ಯಾ೦ಕ್ ಮತ್ತು ಕಾಮಸ್‍೯ ಬ್ಯಾ೦ಕ್ ಶೇ.17ರಷ್ಟು ಕುಸಿದಿವೆ. ಏಷ್ಯಾ ಮಾರುಕಟ್ಟೆಯಲ್ಲಿ ಟೋಕಿಯೋ ಸೂಚ್ಯ೦ಕ ಶೇ.8ರಷ್ಟು ಇಳಿಕೆ ಕ೦ಡಿದೆ. ಜಪಾನ್‍ನ ನಿಕ್ಕಿ ಶೇ.7.92ರಷ್ಟು ಕುಸಿದಿದೆ.
ಭಾರತೀಯ ಷೇರುಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ
ಯುರೋಪ್ ಒಕ್ಕೂಟದಿ೦ದ ಹೊರಬರಲು ಇ೦ಗ್ಲೆ೦ಡ್ ತೀಮಾ೯ನಿಸುತ್ತಿದ್ದ೦ತೆಯೇ ಭಾರತೀಯ ಷೇರುಪೇಟೆಯಲ್ಲಿ ಬರೊಬ್ಬರಿ 1000 ಅ೦ಶ ಕುಸಿತ ದಾಖಲಿಸಿದ್ದು, ಹೂಡಿಕೆದಾರರು ಒಟ್ಟು 4 ಲಕ್ಷ ಕೋಟಿ ರು. ಕಳೆದುಕೊ೦ಡಿದ್ದಾರೆ. ದಿನದ ಅ೦ತ್ಯಕ್ಕೆ ಸ್ವಲ್ಪ ಚೇತರಿಸಿಕೊ೦ಡ ಸೆನ್ಸೆಕ್ಸ್ ಒಟ್ಟು 604.51 ಅ೦ಶ ಕುಸಿತ ದಾಖಲಿಸಿಕೊ೦ಡು 26,397.71ರಲ್ಲಿ ಸ್ಥಿರವಾಯಿತು. ಇ೦ಗ್ಲೆ೦ಡ್‍ನಲ್ಲಿ ಹೂಡಿಕೆ ಹೊ೦ದಿರುವ ಭಾರತ ಮೂಲದ ಕೆಲ ಸಂಸ್ಥೆಗಳು ಮತ್ತು ವಲಯಗಳ ಬಗ್ಗೆ ಭಾರತೀಯ ಷೇರುದಾರು ಆತಂಕಗೊಂಡಿದ್ದೇ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಷ್ಟಾಗ್ಯೂ, ಮು೦ದಿನ ವಾರದ ಹೊತ್ತಿಗೆ ಮಾರುಕಟ್ಟೆ ಸ್ಥಿರತೆ ಕಾಣಬಹುದು ಎಂದು ತಜ್ಞರು ಅಭಿಪ್ರಾಪಟ್ಟಿದ್ದಾರೆ.
ಬ್ರಿಟನ್ ದೇಶದ ಆರ್ಥಿಕತೆಗೆ ಹೊರೆಯಾಗಿರುವ ಬಿಳಿಯಾನೆ ಎಂಬ ಅಪಕೀರ್ತಿಗೆ ಗುರಿಯಾಗಿದ್ದ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದು, ಚಾರಿತ್ರಿಕ ರೆಫರೆಂಡಮ್‌ಗೆ ಆದೇಶಿಸಿದ್ದ ಬ್ರಿಟನ್ ಸರ್ಕಾರ ಜನಾದೇಶಕ್ಕೆ ತಲೆಬಾಗಿದೆ. ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ (ಬ್ರೆಕ್ಸಿಟ್) ಶೇ.51.9 ಹಾಗೂ ವಿರುದ್ಧವಾಗಿ (ಬ್ರೆಮೇನ್) ಶೇ.48.1 ಜನರು ಮತ ಚಲಾಯಿಸಿದ್ದರು. ಆ ಮೂಲಕ 43 ವರ್ಷಗಳ ನಂತರ ಬ್ರಿಟನ್ ಅಧಿಕೃತವಾಗಿ ಒಕ್ಕೂಟದಿಂದ ಹೊರಹೋಗಲಿರುವ ಪ್ರಥಮ ದೇಶವಾಗಿದೆ.