ನವದೆಹಲಿ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದ ಅತ್ಯಂತ ಅಗ್ಗದ ಬೆಲೆಯ ಫ್ರೀಡಂ 251 ಸ್ಮಾರ್ಟ್ ಫೋನ್ ಮತ್ತೆ ಕಾರ್ಯಾರಂಭಕ್ಕೆ ಮುಂದಾಗಿದ್ದು, ಇಂದಿನಿಂದ ಮೊಬೈಲ್ ವಿತರಣಾ ಕಾರ್ಯವನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿರುವ ಗ್ರಾಹಕರಿಗೆ ಜೂನ್ 28 ರಿಂದ ಮೊಬೈಲ್ ವಿತರಿಸುವುದಾಗಿ ಕೆಲವು ದಿನಗಳ ಹಿಂದಷ್ಟೇ ನೊಯ್ಡಾ ಮೂಲಕ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಿತ್ತು. ಅದರಂತೆ ಇಂದಿನಿಂದ ಫ್ರೀಡಂ 251 ಮೊಬೈಲ್ ವಿತರಣಾ ಕಾರ್ಯ ಮತ್ತೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಕೇವಲ ರು. 251 ಗೆ ಸ್ವದೇಶಿ ನಿರ್ಮಿತ ಸ್ಮಾರ್ಟ್ ಫೋನ್ ವೊಂದನ್ನು ನೀಡುವುದಾಗಿ ಹೇಳಿಕೊಂಡಿತ್ತು. ವಿಶ್ವದ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಎಂಬ ಹೆಗ್ಗಳಿಕೆ ಪಡೆದಿದ್ದ ಫ್ರೀಡಂ 251 ಸಾಕಷ್ಟು ಚರ್ಚೆಯ ಕೇಂದ್ರ ಬಿಂದುವಾಗಿತ್ತು.
ಕೇವಲ ರು.251 ತಾನೆ ಒಮ್ಮೆ ಕೊಂಡು ನೋಡೋಣ ಎಂದು ಜನತೆ ಮುನ್ನುಗ್ಗಿದ್ದರು. ಆದರೆ, ಮೊಬೈಲ್ ಕಂಪನಿ ಘೋಷಣೆ ಮಾಡಿದ ಕೇವಲ ಒಂದೇ ದಿನದಲ್ಲಿ ತನ್ನ ಬುಕಿಂಗ್ ನ್ನು ಸ್ಥಗಿತಗೊಳಿಸಿತ್ತು. ಇದಲ್ಲದೆ, ಕಂಪನಿಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.
ತದನಂತರ ಎಲ್ಲಾ ಆರೋಪಗಳನ್ನು ಬದಿಗೊತ್ತಿ ಮತ್ತೆ ಮುನ್ನುಗ್ಗಲು ಆರಂಭಿಸಿದ್ದ ರಿಂಗಿಂಗ್ ಬೆಲ್ಸ್ ಕಂಪನಿಯು ಜೂನ್. 28 ರಿಂದ ಮತ್ತೆ ಫ್ರೀಡಂ 251 ಸ್ಮಾರ್ಟ್ ಫೋನ್ ಬುಕಿಂಗ್ ನ್ನು ಮರು ತೆರೆಯುವುದಾಗಿ ಘೋಷಣೆ ಮಾಡಿತ್ತು.