ವಾಣಿಜ್ಯ

ಮುಂದುವರೆದ ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ; ಮದುಮಕ್ಕಳಿಗೆ ಪರದಾಟ

Guruprasad Narayana

ಬೆಂಗಳೂರು: ಕೇಂದ್ರ ಬಜೆಟ್ ಬಿಸಿ ಅನಿರೀಕ್ಷಿತ ವಲಯಕ್ಕೆ ಮುಟ್ಟಿದೆ. ೨೦೧೬-೧೭ ರ ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳಿಗೆ ೧% ಅಬಕಾರಿ ತೆರಿಗೆ ಪರಿಚಯಿಸಿರುವುದನ್ನು ವಿರೋಧಿಸಿ ಚಿನ್ನಾಭರಣ ಉತ್ಪಾದಕರು ಮತ್ತು ವ್ಯಾಪಾರಿಗಳು ಮಾರ್ಚ್ ೨ ರಿಂದ ೭ ರವರೆಗೆ ಮುಷ್ಕರ ಹೂಡಿದ್ದರು. ಈಗ ಈ ಮುಷ್ಕರ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದು, ಈ ತಿಂಗಳಲ್ಲಿ ಮದುವೆ ಸಮಾರಂಭಗಳನ್ನು ನಿಗದಿ ಮಾಡಿಕೊಂಡಿರುವ ಕುಟುಂಬಗಳಿಗೆ ಚಿನ್ನಾಭರಣಕ್ಕಾಗಿ ಪರದಾಡುವಂತಾಗಿದೆ.

ಹೊಸದಾಗಿ ಪರಿಚಯಿಸಲಾಗಿರುವ ೧% ಅಬಕಾರಿ ತೆರಿಗೆಯನ್ನು ವಾಪಸ್ ಪಡೆಯುವಂತೆ ವಿವಿಧ ಚಿನ್ನಾಭಾರಣ ವ್ಯಾಪಾರಿಗಳ ಸಂಘಟನೆಗಳು ವಿತ್ತ ಸಚಿವ ಅರುಣ್ ಜೇಟ್ಲಿ ಒಳಗೊಂಡಂತೆ ವಿವಿಧ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಪೂರಕ ಪ್ರತಿಕ್ರಿಯೆ ಬಂದಿಲ್ಲ.

ಈ ಮುಷ್ಕರ ಮದುವೆ ಸಮಾರಂಭಗಳನ್ನು ಈ ತಿಂಗಳಲ್ಲಿ ನಿಗದಿ ಮಾಡಿದ್ದ ಕುಟುಂಬಗಳಿಗೆ ತಟ್ಟಿದೆ. ಸರಿಯಾದ ಸಮಯಕ್ಕೆ ಚಿನ್ನಾಭರಣಗಳು ಒದಗದೆ ಹೋಗಿರುವುದು ಹಲವರಿಗೆ ಕಿರಿಕಿರಿ ಉಂಟುಮಾಡಿದೆ. ರಾಜಾಜಿನಗರ ಚಿನ್ನಾಭರಣ ಮಳಿಗೆಯಲ್ಲಿ 'ತಾಳಿ' ಮಾಡಿಸಲು ಕೊಟ್ಟು ಬಂದಿದ್ದ ರವಿತೇಜ್ ತಮ್ಮ ಕೋಪ ತೋಡಿಕೊಂಡಿದ್ದು ಹೀಗೆ "ನಾಳೆ ನನ್ನ ಮದುವೆ ಇದೆ. ಈಗ ನೋಡಿದರೆ ಆಭರಣ ಅಂಗಡಿ ಮುಚ್ಚಿದ್ದಾರೆ. ನನಗೆ ಕೊಟ್ಟಿರುವ ರಶೀದಿಯ ಮೇಲೆ ಅವರ ಸ್ಥಿರ ದೂರವಾಣಿ ಸಂಖ್ಯೆ ಮಾತ್ರ ಇದೆ. ಇಂದು ತಾಳಿ ಕೊಡುವುದಾಗಿ ಅವರು ಭರವಸೆ ನೀಡಿದ್ದರು. ಇವರು ಮುಷ್ಕರ ಮುಂದೂಡಿದರೆ ನಮಗೆ ಮದುವೆ ಮುಂದೂಡಲು ಸಾಧ್ಯವೇ?" ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಮಧ್ಯೆ ಅಬಕಾರಿ ತೆರಿಗೆ ವಾಪಸ್ ಪಡೆಯುವವರೆಗೆ ಶಾಂತಿಯುತ ಧರಣಿ ಮಾಡುವುದಾಗಿ ಚಿನ್ನಾಭರಣಗಳ ವ್ಯಾಪಾರಿಗಳ ಸಂಘ ಎಚ್ಚರಿಸಿದೆ.

SCROLL FOR NEXT