ವಾಣಿಜ್ಯ

ಬೆಲೆ ಏರಿಕೆ ಬಿಸಿ: ಅಕ್ಷಯ ತೃತೀಯ ದಿನ ಚಿನ್ನ ಮಾರಾಟ ಕ್ಷೀಣ

Sumana Upadhyaya

ನವದೆಹಲಿ/ಬೆಂಗಳೂರು/ಚೆನ್ನೈ/ಕೋಲ್ಕತ್ತಾ/: ಅಕ್ಷಯ ತೃತೀಯ ಶುಭಗಳಿಗೆಯ ದಿನವಾದ ಸೋಮವಾರ ದೇಶಾದ್ಯಂತ ಆಭರಣ ಪ್ರಿಯರು ಚಿನ್ನ ಖರೀದಿಸಲು ಮಳಿಗೆಗೆ ಎಡತಾಕಿದ್ದಾರೆ. ಆದರೆ ಕೆಲವು ವಾರಗಳ ಹಿಂದೆ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ ಈ ವರ್ಷ ಚಿನ್ನ ಖರೀದಿಯಲ್ಲಿ ಅಷ್ಟೊಂದು ಉತ್ಸಾಹ ಕಂಡುಬರುತ್ತಿಲ್ಲ.

ಇಂದು ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 30 ಸಾವಿರ ಇದ್ದು, ಗ್ರಾಹಕರು ಅಷ್ಟೊಂದು ಒಲವು ತೋರಿಸುತ್ತಿಲ್ಲ ಎನ್ನುತ್ತಾರೆ ದೆಹಲಿಯ ಪಿ.ಸಿ. ಜ್ಯುವೆಲ್ಲರ್ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಗಾರ್ಗ್.

ಅವರು ಹೇಳುವ ಪ್ರಕಾರ, ಎರಡು ತಿಂಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ 26 ಸಾವಿರವಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಭಾರತದಲ್ಲಿಯೂ ಚಿನ್ನದ ಬೆಲೆ ಹೆಚ್ಚಾಗಿದೆ ಎನ್ನುತ್ತಾರೆ ಅವರು.

ಹಿಂದೂ ಮತ್ತು ಜೈನ ಧರ್ಮಗಳಲ್ಲಿ ಅಕ್ಷಯ ತೃತೀಯ ಪವಿತ್ರ ದಿನವಾಗಿದ್ದು, ಜೀವನದಲ್ಲಿ ಶುಭ ದಿನಗಳನ್ನು ಮತ್ತು ಯಶಸ್ಸನ್ನು ತಂದುಕೊಡುತ್ತದೆ ಎಂಬ ನಿರೀಕ್ಷೆಯಿದೆ. ಮನೆಗೆ ಚಿನ್ನ ಖರೀದಿಸಿ ತಂದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ.

ಈ ವರ್ಷ ಅಕ್ಷಯ ತೃತೀಯ ದಿವಸ ಚಿನ್ನದ ವ್ಯಾಪಾರದಲ್ಲಿ ಶೇಕಡಾ 20ರಷ್ಟು ಮಾತ್ರ ಏರಿಕೆಯಾಗುವ ನಿರೀಕ್ಷೆಯಿದೆ. ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಕಡಿಮೆ ಚಿನ್ನ ಖರೀದಿಸುತ್ತಾರೆ ಎನ್ನುತ್ತಾರೆ ಅಖಿಲ ಭಾರತ ಜೆಮ್ ಮತ್ತು ಆಭರಣ ಒಕ್ಕೂಟದ ಮಾಜಿ ಅಧ್ಯಕ್ಷ ಬಚ್ಚರಾಜ್ ಬಮಲ್ವಾ.

ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾಗಳಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಎರಡು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಖರೀದಿಸಿದರೆ ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯವಾಗಿ ಸಲ್ಲಿಸಬೇಕೆಂಬ ಕೇಂದ್ರ ಸರ್ಕಾರದ ನಿಯಮದಿಂದ ಜನರಿಗೆ ಸ್ವಲ್ಪ ಕಿರಿಕಿರಿ ಎನಿಸುತ್ತದೆ ಎನ್ನುತ್ತಾರೆ ಐ ಲವ್ ಡೈಮಂಡ್ಸ್ ನ ನಿರ್ದೇಶಕ ಸಾಹಿಲ್ ಚ್ಚಬೀರಾ.

ಗ್ರಾಹಕರು ಆನ್ ಲೈನ್ ಮೂಲಕ ಚಿನ್ನ ಖರೀದಿಸುವ ಪ್ರವೃತ್ತಿ ಬೆಳೆದಿದೆ. ನಮ್ಮ ವೆಬ್ ಸೈಟ್ ಪಿಕ್ ಅಪ್ ಸ್ಚೋರ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆನ್ ಲೈನ್ ಪೋರ್ಟಲ್ ಬ್ಲೂಸ್ಟೋನ್.ಕಾಮ್ ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅರವಿಂದ ಸಿಂಗಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

SCROLL FOR NEXT