ನವದೆಹಲಿ: ಅಪಮೌಲ್ಯಕ್ಕೊಳಗಾಗಿರುವ 500 ಮತ್ತು 1000 ರೂಪಾಯಿಗಳ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಕೆಲವು ಮಾಹಿತಿಗಳನ್ನು ನೀಡಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀವು ಬ್ಯಾಂಕ್ ಗಳಿಗೆ ಹೋದರೆ ಅಲ್ಲಿ ಒಂದು ನಿಗದಿತ ಮಾಹಿತಿಗಳನ್ನು ತುಂಬುವ ಅರ್ಜಿ ನೀಡುತ್ತಾರೆ. ಅದನ್ನು ತುಂಬಿ ನಿಮ್ಮ ನಿರ್ದಿಷ್ಟ ಗುರುತು ಚೀಟಿಯನ್ನು ಸಿಬ್ಬಂದಿಗೆ ತೋರಿಸಿ ನೋಟುಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ನೋಟುಗಳ ಬದಲಾವಣೆಗೆ ಕೊರತೆಯಿದೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ಹಣಕಾಸು ಸೇವೆಯ ಕಾರ್ಯದರ್ಶಿ ಅಂಜುಲಿ ಚಿಬ್ ದುಗ್ಗಲ್, ಹೊಸ ಕರೆನ್ಸಿಗಳನ್ನು ಸಾರ್ವಜನಿಕರಿಗೆ ನೀಡಲು ಸರಿಯಾದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಹಣ ಸಿಗಲು ಅನುಕೂಲ ಕಲ್ಪಿಸಲಾಗಿದೆ, ನಾಳೆಯಿಂದ ಎಟಿಎಂಗಳಲ್ಲಿ ಸಾಕಷ್ಟು ಹಣ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಎಟಿಎಂಗಳು ನಾಳೆ ತೆರೆಯಲಿದೆ.