ನವದೆಹಲಿ: ಭಾರೀ ಪ್ರಮಾಣದಲ್ಲಿ ಆರಂಭಿಕ ಆಫರ್ ನೀಡಿರುವ ರಿಲಾಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಸೆಪ್ಟೆಂಬರ್ 5ರಿಂದ ಇಲ್ಲಿಯವರೆಗೆ ಪ್ರತಿ ನಿಮಿಷಕ್ಕೆ 1000, ದಿನಕ್ಕೆ 6 ಲಕ್ಷ ಗ್ರಾಹಕರನ್ನು ಸಂಪಾದಿಸಿ, 83 ದಿನಗಳಲ್ಲಿ 5ಕೋಟಿ ಗಾಹಕರನ್ನು ಹೊಂದಿದೆ ಎಂದು ತನ್ನ ಪ್ರಕಟಣೆಯಲ್ಲಿ ಕಂಪೆನಿ ಹೇಳಿಕೊಂಡಿದೆ.
ಏರ್‍ಟೆಲ್ ಕಂಪೆನಿ 12 ವರ್ಷದಲ್ಲಿ 5 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ವೋಡಾಫೋನ್ ಮತ್ತು ಐಡಿಯಾ ಕಂಪೆನಿ ಈ ಸಂಖ್ಯೆ ತಲುಪಲು 13 ವರ್ಷ ತಗೆದುಕೊಂಡಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಂಪೆನಿ ಡಿ.30ರವರೆಗೆ ವೆಲಕಂ ಆಫರ್ ನೀಡಿದೆ. ಈಗ ಈ ಆಫರನ್ನು ಮಾರ್ಚ್‍ವರೆಗೂ ವಿಸ್ತರಿಸಲು ಕಂಪೆನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಡಿ.27ರಂದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.
ಈ ಹಿಂದೆ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು.