ಇಸ್ಲಾಮಾಬಾದ್: ದ್ವಿಪಕ್ಷೀಯ ಸಂಬಂಧ ಶೀಘ್ರವೇ ಸುಧಾರಣೆಯಾಗದೆ ಇದ್ದರೆ, ಭಾರತದೊಂದಿಗಿನ ವ್ಯಾಪಾರ, ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸುವ ಆಯ್ಕೆ ಬಗ್ಗೆ ಪಾಕಿಸ್ತಾನದ ವ್ಯಾಪಾರ ಸಂಸ್ಥೆ ಚಿಂತನೆ ನಡೆಸಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಪ್ರಸ್ತುತ ಎದುರಾಗಿರುವ ಸನ್ನಿವೇಶದಲ್ಲಿ ಭಾರತದೊಂದಿಗೆ ವ್ಯಾಪಾರ ವಾಣಿಜ್ಯ ವಹಿವಾಟುಗಳನ್ನು ನಡೆಸಲು ಪಾಕಿಸ್ತಾನಕ್ಕೆ ಯಾವುದೇ ಅನಿವಾರ್ಯತೆ ಇಲ್ಲ ಎಂದು ಪಾಕಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರೌಫ್ ಆಲಂ ಹೇಳಿರುವುದನ್ನು ಡಾನ್ ಪತ್ರಿಕೆ ವರದಿ ಮಾಡಿದೆ. ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಪರಿಣಾಮ ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸುವ ಬಗ್ಗೆ ಪಾಕಿಸ್ತಾನದ ಉದ್ಯಮಿಗಳು ಒಗ್ಗಟ್ಟಿನಿಂದ ಇದ್ದು ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಬ್ದುಲ್ ರೌಫ್ ಆಲಂ ತಿಳಿಸಿದ್ದಾರೆ.