ನವದೆಹಲಿ: ದೇಶದ ಪ್ರಮುಖ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಿದ್ದು, ಹೊಸ ದರಗಳು ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.
ಮೂಲಗಳ ಪ್ರಕಾರ ಎಸ್ ಬಿಐ ತನ್ನ ಬಡ್ಡಿದರದಲ್ಲಿ 0.15ರಷ್ಟು ಇಳಿಕೆ ಮಾಡಿದ್ದು, ಇದರಿಂದಾಗಿ ಎಸ್ ಬಿಐ ಬಡ್ಡಿದರ ಪ್ರಮಾಣ ಶೇ.9.1ಕ್ಕೆ ಇಳಿಕೆಯಾದಂತಾಗಿದೆ. ಆ ಮೂಲಕ ಎಸ್ ಬಿಐ ತನ್ನ ಗ್ರಾಹರಿಗೆ ಸಿಹಿ ಸುದ್ದಿ ನೀಡಿದ್ದು, ಗೃಹ, ವಾಹನ ಮತ್ತು ಇತರೆ ಸಾಲಗಳ ಇಎಂಐ ಪ್ರಮಾಣ ಇಳಿಕೆಯಾಗಲಿದೆ. ಅಷ್ಟು ಮಾತ್ರವಲ್ಲದೇ ಮೂಲ ಬಡ್ಡಿದರದಲ್ಲೂ 0.05ರಷ್ಟು ಇಳಿಕೆ ಮಾಡಲಾಗಿದ್ದು, ಇದು ಶೇ.9.10 ಇಳಿಕೆಯಾಗಿದೆ. ನೂತನ ದರಗಳು ಏಪ್ರಿಲ್ 1ರಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ.
ವಿಲೀನ ಪರಿಣಾಮ ಸಹವರ್ತಿ ನೌಕರರಿಗೆ ವಿಆರ್ ಎಸ್ ಆಫರ್
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಎಸ್ ಬಿಐ ಸಹವರ್ತಿ ಬ್ಯಾಂಕ್ ಗಳ ವಿಲೀನ ಬೆನ್ನಲ್ಲೇ ಎಸ್ ಬಿಐ ದೇಶಾದ್ಯಂತ ತನ್ನ ಸಹವರ್ತಿ ಬ್ಯಾಂಕ್ ಗಳಲ್ಲಿರುವ ಸುಮಾರು 12 ಸಾವಿರಕ್ಕೂ ಹೆಚ್ಚು ನೌಕರರಿಗೆ ಸ್ವಯಂ ನಿವೃತ್ತಿ ಪಡೆಯಲು ಆಫರ್ ನೀಡಲಾಗಿದೆ. ಈ ಪೈಕಿ ದೇಶಾದ್ಯಂತ ಸುಮಾರು 2800 ನೌಕರರು ಮಾತ್ರ ವಿಆರ್ ಎಸ್ ಗೆ ಅರ್ಜಿ ಸಲ್ಲಿಸಿದ್ದು, ಇದೇ ಏಪ್ರಿಲ್ 5ರವರೆಗೂ ಸ್ವಯಂ ನಿವೃತ್ತಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.