ವಾಣಿಜ್ಯ

ರೈತ ಸಾಲ ಮನ್ನಾ, ರೂಪಾಯಿ ಮೌಲ್ಯ ಹೆಚ್ಚಳದಿಂದಾಗಿ ಶೇ.6.75-7.5 ಬೆಳವಣಿಗೆ ಕಷ್ಟ: ಆರ್ಥಿಕ ಸಮೀಕ್ಷೆ

Sumana Upadhyaya
ನವದೆಹಲಿ: ರೂಪಾಯಿ ಮೌಲ್ಯ ಹೆಚ್ಚಳ, ರೈತರ ಕೃಷಿ ಸಾಲ ಮನ್ನಾ, ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ, ಪರಿವರ್ತನಾ ಸವಾಲುಗಳಿಂದಾಗಿ ಈ ಹಿಂದೆ ಯೋಜಿಸಿದಂತೆ ಶೇಕಡಾ 6.75ರಿಂದ ಶೇಕಡಾ 7.5ರಷ್ಟು ಆರ್ಥಿಕ ಬೆಳವಣಿಗೆ ಕಷ್ಟವಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಇದೇ ಮೊದಲ ಬಾರಿಗೆ ಕೇಂದ್ರ ಎನ್ ಡಿಎ ಸರ್ಕಾರ 2017-18ನೇ ಸಾಲಿನ ಎರಡನೇ ಅಥವಾ ಮೊದಲ ಮಧ್ಯಂತರ ಆರ್ಥಿಕ ಸಮೀಕ್ಷೆಯನ್ನು ಇಂದು ಬಿಡುಗಡೆ ಮಾಡಿದ್ದು, ಕಳೆದ ಫೆಬ್ರವರಿ ತಿಂಗಳ ನಂತರ ದೇಶದ ಆರ್ಥಿಕ ಪರಿಸ್ಥಿತಿ ಎದುರಿಸಿದ ಹೊಸ ಸವಾಲುಗಳನ್ನು ಅದರಲ್ಲಿ ಉಲ್ಲೇಖಿಸಿದೆ.
ದೇಶದ ಆರ್ಥಿಕತೆ ಸರಾಗವಾಗಿ ಸಾಗಲು ಸಾಕಷ್ಟು ಅವಕಾಶವಿದ್ದು, ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಸುಧಾರಣೆಯನ್ನು ತರಬಹುದು ಎಂದು ಹೇಳಿದೆ. 2016-17ರ ಮೊದಲ ಆರ್ಥಿಕ ತ್ರೈಮಾಸಿಕದಿಂದ ದೇಶದ ಜಿಡಿಪಿ, ಐಐಪಿ, ಕ್ರೆಡಿಟ್, ಹೂಡಿಕೆ ಮತ್ತು ಸಾಮರ್ಥ್ಯ ಬಳಸಿಕೊಳ್ಳುವಿಕೆಯಲ್ಲಿ ದೇಶ ಇಳಿಮುಖ ಕಂಡಿದೆ ಎಂದು ಸಮೀಕ್ಷೆ ಹೇಳುತ್ತದೆ.
ಕಳೆದ ಫೆಬ್ರವರಿಯಲ್ಲಿ ಆರ್ಥಿಕ ಸಮೀಕ್ಷೆಯ ಮೊದಲ ಸಂಪುಟದಲ್ಲಿ ದೇಶದ ಒಟ್ಟಾರೆ ಸರಾಸರಿ ಆರ್ಥಿಕ ಪ್ರಗತಿ ಶೇಕಡಾ 6.75ರಿಂದ ಶೇಕಡಾ 7.5ರಷ್ಟು ಎಂದು ಊಹಿಸಲಾಗಿತ್ತು. ಆದರೆ ನಂತರ ರೂಪಾಯಿ ಮೌಲ್ಯದಲ್ಲಿ ಏರಿಕೆ, ಕೃಷಿ ಸಾಲ ಮನ್ನಾ, ಇಂಧನ, ಟೆಲಿಕಾಂ, ಕೃಷಿ ವಲಯಗಳಲ್ಲಿ ಹೆಚ್ಚಿದ ಒತ್ತಡ, ಜಿಎಸ್ ಟಿ ಜಾರಿಯಿಂದ ಪರಿವರ್ತನಾ ಸವಾಲುಗಳಿಂದಾಗಿ ಆರ್ಥಿಕತೆಗೆ ನಿಜವಾದ ಸವಾಲುಗಳು ಎದುರಾದವು. ಕಳೆದ ಫೆಬ್ರವರಿಯಿಂದ ರೂಪಾಯಿ ಬೆಲೆಯಲ್ಲಿ ಶೇಕಡಾ 1.5 ರಷ್ಟು ಹೆಚ್ಚಳವಾಗಿದೆ.
ಅಲ್ಪಾವಧಿಯಲ್ಲಿ ಆರ್ಥಿಕ ಮಾರುಕಟ್ಟೆಯ ವಿಶ್ವಾಸವನ್ನು ವರ್ಧಿಸಿದ ಟ್ವಿನ್ ಬ್ಯಾಲೆನ್ಸ್ ಶೀಟ್ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.
ಆರ್ಥಿಕ ಚಟುವಟಿಕೆ ವೃದ್ಧಿಯಾಗಲು ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದ ನಂತರ ಸಾರಿಗೆ ನಿರ್ಬಂಧಗಳನ್ನು ತಗ್ಗಿಸುವುದು ಸಣ್ಣ ಮಟ್ಟಿನ ಪರಿಹಾರ ನೀಡಲಿದೆ ಎಂದು ಸಮೀಕ್ಷೆ ತಿಳಿಸಿದೆ.
SCROLL FOR NEXT