ಮುಂಬೈ: ಕಳೆದ ವರ್ಷ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ರೂ, ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿತು. ಇದು ನಮ್ಮ ದೇಶದ ಆರ್ಥಿಕತೆಯಲ್ಲಿ ಬಹುದೊಡ್ಡ ತೀರ್ಮಾನವಾಗಿತ್ತು. ದೇಶದಲ್ಲಿ ಕಪ್ಪು ಹಣ ಚಲಾವಣೆ ಮತ್ತು ಅಕ್ರಮವಾಗಿ ಹಣ ಸಂಗ್ರಹಣೆಯಲ್ಲಿ ಸುಧಾರಣೆ ತರಲು ಬಹಳ ಧೈರ್ಯವಾದ ಮತ್ತು ದೊಡ್ಡ ಕ್ರಮ ಎಂದು ಕೇಂದ್ರ ಸರ್ಕಾರ ಇದುವರೆಗೆ ಬಿಂಬಿಸುತ್ತಾ ಬಂದಿದೆ. ಆದರೆ ಸರ್ಕಾರದ ಈ ನಿರ್ಧಾರ ವೈಫಲ್ಯವಾಗಿದೆಯೇ ಎಂಬ ಸಂಶಯ ಇಂದು ಅನೇಕರನ್ನು ಕಾಡುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿನ್ನೆ 2016-17ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಶೇಕಡಾ 99ರಷ್ಟು ಅಧಿಕ ಮೌಲ್ಯದ ನಿಷೇಧಿತ ನೋಟುಗಳನ್ನು ವ್ಯವಸ್ಥೆಗೆ ಹಿಂಪಡೆಯಲಾಗಿದೆ ಎಂದು ಪ್ರಕಟಿಸಿದೆ. ಆದರೆ ಶೇಕಡಾ 86.4ರಷ್ಟು ಕಪ್ಪು ಹಣವನ್ನು ಹಿಂಪಡೆಯಬೇಕೆಂಬ ಸರ್ಕಾರದ ಉದ್ದೇಶ ಅಥವಾ ಗುರಿಯಲ್ಲಿ ವೈಫಲ್ಯ ಕಂಡುಬಂದಿದೆ ಎಂಬುದು ಸಾಬೀತಾಗಿದೆ.
ಮೊನ್ನೆ ಜೂನ್ 30ರವರೆಗೆ ಆರ್ ಬಿಐ 15.28 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಘೋಷಿಸಿತ್ತು. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ ಬಿಐಯ ಆದಾಯ 23.56 % ಗೆ ಕುಸಿದಿತ್ತು. ವೆಚ್ಚ 107.8 % ಜಾಸ್ತಿಯಾಗಿತ್ತು. ಹೊಸ ನೋಟುಗಳ ಮುದ್ರಣ ವೆಚ್ಚವೇ ಇದಕ್ಕೆ ಕಾರಣವಾಗಿದೆ. ನೋಟು ಅಮಾನ್ಯತೆ ನಂತರ ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐಗೆ 7,965 ಕೋಟಿ ರೂಪಾಯಿ ವೆಚ್ಚ ತಗಲಿದೆ.
ಕಳೆದೊಂದು ವರ್ಷದಲ್ಲಿ ಸರ್ಕಾರ ಕಡಿಮೆ ಅಂದರೆ 30,659 ಕೋಟಿ ರೂಪಾಯಿ ಲಾಭಾಂಶ ಪಡೆದಿದ್ದು ಈ ಪ್ರಮಾಣ ಕಳೆದ ವರ್ಷಕ್ಕಿಂತ ಅರ್ಧದಷ್ಟಾಗಿದೆ. ಅಂದರೆ ನೋಟು ಅಮಾನ್ಯತೆ ನಂತರ ಕೇಂದ್ರ ಸರ್ಕಾರ ಸುಮಾರು 30,000 ಕೋಟಿ ರೂಪಾಯಿ ವೆಚ್ಚ ಮಾಡಿದೆ.
ದೇಶದ ಸಾಮಾನ್ಯ ಜನತೆಯ ಆದಾಯವನ್ನು ಪರಿಗಣಿಸಿದರೆ ಸರ್ಕಾರದ ವೆಚ್ಚ ನಿರೀಕ್ಷೆಗೂ ಮೀರಿಯಾಗಿದೆ. ಇದು ದೇಶದ ಆರ್ಥಿಕತೆ ಮೇಲೆ, ವಾರ್ಷಿಕ ಆರ್ಥಿಕ ಸರಾಸರಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಅಧಿಕ ಮೌಲ್ಯದ ನೋಟು ಅಮಾನ್ಯತೆ ನಂತರ ನಮ್ಮ ದೇಶದ ಜಿಡಿಪಿ ನಾಲ್ಕನೇ ಆರ್ಥಿಕ ತ್ರೈಮಾಸಿಕದಲ್ಲಿ ಶೇಕಡಾ 6.1ಕ್ಕೆ ಕುಸಿದಿದ್ದು ಅದರ ಮೊತ್ತ ಹಿಂದಿನ ನಾಲ್ಕನೇ ಆರ್ಥಿಕ ತ್ರೈಮಾಸಿಕದಲ್ಲಿ ಶೇಕಡಾ 7ರಷ್ಟಾಗಿತ್ತು.
ನೋಟು ಅಮಾನ್ಯತೆ ನಂತರ 9 ತಿಂಗಳು ಕಳೆದಿವೆ. ಆದರೂ ಕೂಡ ಅಮಾನ್ಯತೆಯ ಮೂರು ಸ್ಪಷ್ಟ ಉದ್ದೇಶಗಳಾದ ಕಪ್ಪು ಹಣ ಚಲಾವಣೆ ನಿಯಂತ್ರಣ, ಭ್ರಷ್ಟಾಚಾರ ನಿಗ್ರಹ ಮತ್ತು ಭಯೋತ್ಪಾದಕರಿಗೆ ಹಣ ವರ್ಗಾವಣೆಯಾಗುವುದನ್ನು ತಡೆಗಟ್ಟುವುದನ್ನು ನಿಯಂತ್ರಿಸಲು ಯಶಸ್ವಿಯಾಗಿಲ್ಲ.
ಈ ಮೂರೂ ಉದ್ದೇಶಗಳ ಈಡೇರಿಕೆಯಾಗಿಲ್ಲ. ನೋಟುಗಳ ಅಮಾನ್ಯೀಕರಣ ಯಶಸ್ಸು ಕಂಡಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎನ್ನುತ್ತಾರೆ ಪ್ರಮುಖ ಆರ್ಥಿಕ ತಜ್ಞ ಮದನ್ ಸಬ್ನವಿಸ್. ಡಿಜಿಟಲ್ ವಹಿವಾಟು ದೇಶದಲ್ಲಿ ನೋಟು ಅಮಾನ್ಯತೆ ನಂತರ ಹೆಚ್ಚಾಗಿದೆ. ಆದರೆ ಡಿಜಿಟಲ್ ವಹಿವಾಟಿಗೆ ನೋಟು ಅನಾಣ್ಯೀಕರಣ ಬೇಕಾಗಿರಲಿಲ್ಲ ಎನ್ನುತ್ತಾರೆ ಅವರು.
ಆದರೆ ಈ ಮಾತನ್ನು ಎಲ್ಲರೂ ಒಪ್ಪುವುದಿಲ್ಲ. ಈ ವಿಚಾರದಲ್ಲಿ ಸಮಗ್ರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು. ಕೇವಲ ಬ್ಯಾಂಕುಗಳಿಗೆ ಹಿಂದಕ್ಕೆ ಬಂದ ನೋಟುಗಳ ಮೊತ್ತವನ್ನು ಮಾತ್ರ ಪರಿಗಣಿಸಿದರೆ ಸಾಲದು. ತೆರಿಗೆ ಮೂಲದಲ್ಲಿ ವಿಸ್ತರಣೆ, ಆರ್ಥಿಕತೆಯ ಔಪಚಾರಿಕತೆ ಮತ್ತು ಮುಂದಿನ ದಿನಗಳಲ್ಲಿ ಬರುವ ದಾಖಲೆಗಳಿಲ್ಲದ ಹಣವು ನೋಟುಗಳ ಅನಾಣ್ಯೀಕರಣದಿಂದ ಸಾಧ್ಯವಾಗಲಿದೆ ಎನ್ನುತ್ತಾರೆ ಎಸ್ ಬಿಐಯ ಮುಖ್ಯ ಆರ್ಥಿಕ ಸಲಹೆಗಾರ ಡಾ.ಸೋಮ್ಯ ಕಾಂತಿ ಘೋಷ್.
ಚಲಾವಣೆಯಲ್ಲಿರುವ ಬ್ಯಾಂಕು ನೋಟುಗಳ ಮೌಲ್ಯ ಶೇಕಡಾ 20.2ರಷ್ಟು ಕುಸಿದಿದೆ. ಆದರೆ ಇದರ ಪ್ರಮಾಣ ಶೇಕಡಾ 11.1ರಷ್ಟು ಜಾಸ್ತಿಯಾಗಿದೆ. ಆದಾಯದ ಉಳಿತಾಯ ಶೇಕಡಾ 20.4ರಷ್ಟು ಹೆಚ್ಚಾಗಿದೆ. ಇದು ನಿಖರ ಲೆಕ್ಕಾಚಾರವಲ್ಲ, ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಸಾವಿರ ರೂಪಾಯಿ ಮುಖಬೆಲೆಯ 89 ದಶಲಕ್ಷ ನೋಟುಗಳ ಲೆಕ್ಕ ಸಿಕ್ಕಿಲ್ಲ. ಇದು ಸಾಗರದಲ್ಲಿ ಒಂದು ಚಿಕ್ಕ ವಸ್ತುವನ್ನು ಹುಡುಕುವ ಪ್ರಯತ್ನದಂತೆ. ಸಾಮೂಹಿಕ ನಾಶದ ಮಧ್ಯೆ ಶಸ್ತ್ರಾಸ್ತ್ರಗಳನ್ನು ಹುಡುಕುವ ಅಮೆರಿಕಾದ ಪ್ರಯತ್ನದಂತೆ ಕಪ್ಪು ಹಣದ ಅಪಾರ ಚಲಾವಣೆ ಮಧ್ಯೆ ಅದಕ್ಕಾಗಿ ಹುಡುಕಾಟ ನಡೆಸುವ ಸರ್ಕಾರದ ಪ್ರಯತ್ನವಾಗಿದೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos