ನಾರಾಯಣ ಮೂರ್ತಿ ಅವರೊಂದಿಗೆ ಉತ್ತಮ ಬಾಂಧವ್ಯ ಇದೆ: ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ
ಭಿನ್ನಾಭಿಪ್ರಾಯ ಇರುವುದನ್ನು ನಿರಾಕರಿಸಿರುವ ಸಿಇಒ ವಿಶಾಲ್ ಸಿಕ್ಕಾ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹೇಳಿದ್ದಾರೆ.
ನವದೆಹಲಿ: ಇನ್ಫೋಸಿಸ್ ಸಂಸ್ಥೆಯಲ್ಲೂ ಟಾಟಾ ಮಾದರಿಯಲ್ಲೇ ಹಾಲಿ ಆಡಳಿತ ಮಂಡಳಿ ಹಾಗೂ ಸ್ಥಾಪಕ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ ಎಂಬ ವರದಿಗಳ ಬಗ್ಗೆ ಸಿಇಒ ವಿಶಾಲ್ ಸಿಕ್ಕಾ ಪ್ರತಿಕ್ರಿಯೆ ನೀಡಿದ್ದಾರೆ.
ಭಿನ್ನಾಭಿಪ್ರಾಯ ಇರುವುದನ್ನು ನಿರಾಕರಿಸಿರುವ ಸಿಇಒ ವಿಶಾಲ್ ಸಿಕ್ಕಾ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಹೇಳಿದ್ದಾರೆ. ಇನ್ಫೋಸಿಸ್ ಸ್ಥಾಪಕರೊಂದಿಗೆ ನಾನು ಅತ್ಯುತ್ತಮ ಬಾಂಧವ್ಯ, ಸಂಪರ್ಕ ಹೊಂದಿದ್ದೇನೆ. ನಾರಾಯಣ ಮೂರ್ತಿ ಅವರನ್ನು ವರ್ಷದಲ್ಲಿ ಕನಿಷ್ಠ 4-6 ಬಾರಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
ಇತರ ಸ್ಥಾಪಕ ಸದಸ್ಯರನ್ನು ಆಗಾಗ್ಗೆ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿರುವ ವಿಶಾಲ್ ಸಿಕ್ಕಾ, ನಾರಾಯಣ ಮೂರ್ತಿ ಅವರನ್ನು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದು, ಭೇಟಿ ವೇಳೆ ಚರ್ಚೆಯಾಗುವ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂಬೈ ನಲ್ಲಿ ನಡೆದ ಕೋಟಕ್ ಚೇಸಿಂಗ್ ಗ್ರೋತ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಇನ್ಫೋಸಿಸ್ ನ ಹಾಲಿ ಆಡಳಿತ ಮಂಡಳಿ ಹಾಗೂ ಸ್ಥಾಪಕ ಸದಸ್ಯರ ಕುರಿತು ಮಾಧ್ಯಮಗಳು ವರದಿ ಪ್ರಕಟಿಸುತ್ತಿರುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಿಇಒ ಆಗಿರುವುದು ನನ್ನ ಸೌಭಾಗ್ಯ ಎಂದಿರುವ ಸಿಕ್ಕಾ, ಸ್ಥಾಪಕ ಸದಸ್ಯ ನಾರಾಯಣ ಮೂರ್ತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಳಿತದ ಕಳಪೆ ಗುಣಮಟ್ಟವನ್ನು ನಿರಾಕರಿಸಿದ್ದಾರೆ.
ಸಂಸ್ಥೆಯನ್ನು ಬಿಟ್ಟು ಹೋಗುತ್ತಿರುವ ಪ್ರಮುಖ, ಆಯಕಟ್ಟಿನ ಹುದ್ದೆಗಳಲ್ಲಿರುವವರಿಗೆ ರಾಜೀವ್ ಬನ್ಸಾಲ್ ಹಾಗೂ ಡೇವಿಡ್ ಕೆನ್ನೆಡಿಗೆ ಅತಿ ಹೆಚ್ಚು ಬೀಳ್ಕೊಡುಗೆ ವೇತನ (23 ಕೋಟಿ) ನೀಡಿರುವುದು ಹಾಗೂ ಸಿಕ್ಕಾ ಅವರಿಗೆ ಕಳೆದ ವರ್ಷ ವೇತನ ಹೆಚ್ಚು ಮಾಡಿದುವುದರ ಹೊರತಾಗಿಯೂ ಈಗ ಒಟ್ಟು 11 ಮಿಲಿಯನ್ ಡಾಲರ್ ವೇತವನ್ನು ನೀಡುವ ಪ್ರಸ್ತಾವನೆ ಸೇರಿದಂತೆ ಹಾಲಿ ಆಡಳಿತ ಮಂಡಳಿಯ ಹಲವು ನಿರ್ಧಾರಗಳ ಬಗ್ಗೆ ಸ್ಥಾಪಕ ಸದಸ್ಯರಾದ ನಾರಾಯಣ ಮೂರ್ತಿ ಹಾಗೂ ಮಾಜಿ ಸಿಇಒ ಮೋಹನ್ ದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶಾಲ್ ಸಿಕ್ಕಾ ಸ್ಪಷ್ಟನೆ ನೀಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.