ಘಾಜಿಯಾಬಾದ್: ವಿಶ್ವದ ಅತ್ಯಂತ ಅಗ್ಗದ ಬೆಲೆಯಲ್ಲಿ ಫ್ರೀಡಂ 251 ಎಂಬ ಸ್ಮಾರ್ಟ್‌ಫೋನ್ ನೀಡುವುದಾಗಿ ಭರವಸೆ ನೀಡಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಿತ್ ಗೋಯಲ್ ಅವರನ್ನು ವಂಚನೆ ಆರೋಪದ ಮೇಲೆ ಬಂಧಿಸಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
ರಿಂಗಿಂಗ್ ಬೆಲ್ಸ್ ಕಂಪನಿ ತನಗೆ 16 ಲಕ್ಷ ರುಪಾಯಿ ವಂಚಿಸಿದೆ ಎಂದು ಆರೋಪಿಸಿ ಆಮ್ ಎಂಟರ್ ಪ್ರೈಸಸ್ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಘಾಜಿಯಾಬಾದ್ ಪೊಲೀಸರು ನಿನ್ನೆ ಎಫ್ಐಆರ್ ದಾಖಲಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಯಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಘಾಜಿಯಾಬಾದ್ ಉಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನಿಶ್ ಮಿಶ್ರಾ ಅವರು ಹೇಳಿದ್ದಾರೆ.
2015ರಲ್ಲಿ ಫ್ರೀಡಂ 251 ಸ್ಮಾರ್ಟ್‌ಫೋನ್ ನ ಡಿಸ್ಟ್ರಿಬ್ಯುಷನ್ ನೀಡುವುದಾಗಿ ಹೇಳಿ ರಿಂಗಿಂಗ್ ಬೆಲ್ಸ್ ಕಂಪನಿ ತಮ್ಮಿಂದ 16 ಲಕ್ಷ ರುಪಾಯಿ ಪಡೆದಿದೆ ಎಂದು ಆಮ್ ಎಂಟರ್ ಪ್ರೈಸಸ್ ಆರೋಪಿಸಿದೆ.
ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 251 ರು.ಗೆ ಸ್ಮಾರ್ಟ್ ಫೋನ್ ಮಾರಾಟ ಮಾಡುವುದಾಗಿ ಹೇಳಿ ವಿಶ್ವಾದ್ಯಂತ ಭಾರಿ ಪ್ರಚಾರ ಪಡೆದುಕೊಂಡಿತ್ತು. ಆದರೆ ಈ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಅಗ್ಗದ ಸ್ಮಾರ್ಟ್ ಫೋನ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಗ್ಗದ ದರದ ಫೋನ್ ಮಾರಾಟ ಪ್ರಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾದ್ಯಂತ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಈ ಫೋನ್ ಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದರು. ಆದರೆ ಬಳಿಕದ ದಿನಗಳಲ್ಲಿ ಸಂಸ್ಥೆ ಗ್ರಾಹಕರಿಗೆ ಫೋನ್ ಮಾರಾಟ ಮಾಡಿದ ಕುರಿತು ಯಾವುದೇ ಸುದ್ದಿ ನೀಡಿಲ್ಲ.
ಫೋನ್ ಆಶ್ವಾಸನೆಯೇ ಇನ್ನೂ ಈಡೇರಿಲ್ಲ ಅದಾಗಲೇ ಇದೇ ಸಂಸ್ಥೆ ಮತ್ತೊಂದು ಘೋಷಣೆ ಮೂಲಕ ಸುದ್ದಿಗೆ ಗ್ರಾಸವಾಗಿತ್ತು, ಸ್ಮಾರ್ಟ್ ಫೋನ್ ಬೆನ್ನಲ್ಲೇ ಅಗ್ಗದ ದರದ ಸ್ಮಾರ್ಟ್ ಟಿವಿಗಳನ್ನು ಕೂಡ ತಯಾರಿಸುವುದಾಗಿ ಹೇಳಿ ಸಂಸ್ಥೆ ಮತ್ತೆ ಪುಕ್ಕಟೆ ಪ್ರಚಾರ ಪಡೆದಿತ್ತು.