ವಾಣಿಜ್ಯ

ಹೋಟೆಲ್, ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ಪಾವತಿ ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆ

Lingaraj Badiger
ನವದೆಹಲಿ: ಹೊಟೇಲ್ ಅಥವಾ ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ ಎಂದಿರುವ  ಕೇಂದ್ರ ಸರ್ಕಾರ, ಅಲ್ಲಿನ ಸೇವೆಯಿಂದ ನಿಮಗೆ ತೃಪ್ತಿಯಾಗದಿದ್ದಲ್ಲಿ ಬಿಲ್ ನಲ್ಲಿ ಸೇವಾ ಶುಲ್ಕ ಸೇರಿಸದಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಬಹುದಾಗಿದೆ ಎಂದು ಸೋಮವಾರ ಸ್ಪಷ್ಟಪಡಿಸಿದೆ.
ಟಿಪ್ಸ್ ಬದಲಿಗೆ ಶೇಕಡಾ 5ರಿಂದ 20ರವರೆಗಿನ ಸೇವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಹಲವು ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದ್ದು, ಸೇವೆ ತೃಪ್ತಿಕರವಲ್ಲ ಎನಿಸಿದಲ್ಲಿ ಗ್ರಾಹಕರು ಅದನ್ನು ಪಾವತಿಸಬೇಕಾಗಿಲ್ಲ, ಅದನ್ನು ತೆರುವಂತೆ ಯಾರೂ ಒತ್ತಡ ಹೇರುವಂತಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಹಜವಾಗಿಯೇ ಬಿಲ್ ಗೆ ಸೇವಾ ಶುಲ್ಕ ಸೇರಿಸುವುದು ವಾಣಿಜ್ಯ ವ್ಯವಹಾರ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ ಈ ಬಗ್ಗೆ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸೂಚನೆ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಳಿಕೊಂಡಿದೆ.
ಸೇವಾ ಶುಲ್ಕ ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟದ್ದು. ಗ್ರಾಹಕನಿಗೆ ಸೇವೆ ತೃಪ್ತಿಕರ ಎನಿಸದಿದ್ದಲ್ಲಿ ಅದನ್ನು ಆತ ಪಾವತಿ ಮಾಡಬೇಕಾಗಿಲ್ಲ ಎಂದು ಹೋಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ ತಿಳಿಸಿದೆ. ಅಂದರೆ ಇದನ್ನು ಸ್ವತಃ ಒಪ್ಪಿಕೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
SCROLL FOR NEXT