ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್
ಬೆಂಗಳೂರು: ಅಧಿಕ ಮೌಲ್ಯದ ನೋಟುಗಳ ಚಲಾವಣೆ ಹಿಂತೆಗೆತದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಪ್ರಾಮುಖ್ಯತೆ ನೀಡುತ್ತಿರುವ ಸಂದರ್ಭದಲ್ಲಿ, ಕಾರ್ಡುಗಳು, ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರಗಳು 2020ರ ವೇಳೆಗೆ ತ್ಯಾಜ್ಯಗಳಾಗಲಿವೆ ಎಂದು ಬದಲಾವಣೆಯ ಭಾರತೀಯ ರಾಷ್ಟ್ರೀಯ ಸಂಸ್ಥೆ(ನೀತಿ) ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಹೇಳಿದ್ದಾರೆ.
ಹಣಕಾಸು ತಂತ್ರಜ್ಞಾನ ಮತ್ತು ಸಾಮಾಜಿಕ ಸಂಶೋಧನೆಯ ವಿಷಯದಲ್ಲಿ ಅಧಿಕ ಅಡ್ಡಿ, ತೊಂದರೆಗಳ ಮಧ್ಯೆ ಭಾರತದಲ್ಲಿದ್ದು, ಈ ಅಡ್ಡಿ, ಆತಂಕಗಳನ್ನು ಮೀರಿ ಭಾರತ ಪುಟಿದೇಳಲಿದೆ ಎಂದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ನಲ್ಲಿ ಮಾತನಾಡಿದ ಅವರು, 2020ರ ವೇಳೆಗೆ ಭಾರತದಲ್ಲಿ ಎಲ್ಲಾ ಡೆಬಿಟ್, ಕ್ರೆಡಿಟ್ ಕಾರ್ಡುಗಳು, ಎಟಿಎಂ, ಪಾಯಿಂಟ್ ಆಫ್ ಸೇಲ್ ಯಂತ್ರಗಳು ಸಂಪೂರ್ಣವಾಗಿ ಅಪ್ರಸ್ತುತವಾಗಲಿದೆ ಎಂದರು.
ಈ ಎಲ್ಲಾ ಯಂತ್ರಗಳು, ಕಾರ್ಡುಗಳು ಭಾರತದಲ್ಲಿ ಇನ್ನು ನಾಲ್ಕೈದು ವರ್ಷಗಳಲ್ಲಿ ತ್ಯಾಜ್ಯಗಳಾಗಲಿವೆ. ಇಂದು ಬಹುತೇಕರು ತಮ್ಮ ಹೆಬ್ಬೆರಳು ಮೂಲಕ ನಿಮಿಷಗಳಲ್ಲಿ ವಹಿವಾಟು ನಡೆಸುತ್ತಾರೆ. ಅವರು ಯುವ ಪ್ರವಾಸಿ ಭಾರತೀಯ ದಿವಸದಲ್ಲಿ ಸ್ಟಾರ್ಟ್ ಅಪ್ಸ್ ಮತ್ತು ಸಂಶೋಧನೆಗಳಿಂದ ಭಾರತದಲ್ಲಿ ಸಾಮಾಜಿಕ ಪರಿಣಾಮ ವಿಷಯದಡಿ ಮಾತನಾಡಿದರು.
ನೋಟುಗಳ ಚಲಾವಣೆ ರದ್ದು ಮತ್ತು ಡಿಜಿಟಲ್ ಪಾವತಿಯಂತಹ ಪ್ರಯತ್ನಗಳ ನಂತರವೂ ಕೇವಲ ಶೇಕಡಾ 2ರಿಂದ 2.5ರಷ್ಟು ಮಂದಿ ಭಾರತೀಯರು ತೆರಿಗೆ ಪಾವತಿಸುತ್ತಿದ್ದಾರೆ. ಹಾಗಾಗಿ ಭಾರತೀಯರು ಅನೌಪಚಾರಿಕತೆಯಿಂದ ಔಪಚಾರಿಕ ಆರ್ಥಿಕತೆಯತ್ತ ಹೊರಳುವ ಅಗತ್ಯವಿದೆ ಎಂದರು.