ವಾಣಿಜ್ಯ

ನೋಟ್ ಬ್ಯಾನ್: ಆರ್ ಬಿಐ ವಿವರಣೆ ತೃಪ್ತಿಕರವಲ್ಲದಿದ್ದರೆ, ಪಿಎಸಿಯಿಂದ ಪ್ರಧಾನಿಗೆ ನೋಟಿಸ್ ಸಾಧ್ಯತೆ

Lingaraj Badiger
ನವದೆಹಲಿ: ನೋಟ್ ನಿಷಧಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌(ಆರ್ ಬಿಐ) ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಸಂಸತ್ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ನೀಡುವ ವಿವರಣೆ ತೃಪ್ತಿಕರವಲ್ಲದಿದ್ದರೆ ಪ್ರಧಾನಿ ನರೇಂದ್ರ ಅವರಿಗೆ ಪಿಎಸಿ ವಿವರಣೆ ಕೋರಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಈ ಸಂಬಂಧ ಇದೇ 20ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್, ಹಣಕಾಸು ಕಾರ್ಯದರ್ಶಿ ಅಶೋಕ್ ಲವಸಾ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಭಾಗವಹಿಸಲಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ನಾವು ಅವರಿಗೆ ಕಳಹಿಸಿರುವ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ. ಜನವರಿ 20ರ ಸಭೆಗೂ ಮುನ್ನ ಪ್ರತಿಕ್ರಿಯೆ ಬರುವ ಸಾಧ್ಯತೆ. ಅವರ ಪ್ರತಿಕ್ರಿಯೆಯನ್ನು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಪಿಎಸಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಕೆ.ವಿ. ಥಾಮಸ್ ಅವರು ಹೇಳಿದ್ದಾರೆ.
ಒಂದು ವೇಳೆ ಉರ್ಜಿತ್ ಅವರು ನೀಡಿರುವ ವಿವರಣೆ ತೃಪ್ತಿಕರವಲ್ಲದೇ ಇದ್ದರೆ, ಪ್ರಧಾನಿ ಮೋದಿಯವರಿಗೆ ನೋಟಿಸ್ ನೀಡಲಾಗುವುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಥಾಮಸ್ ಅವರು, ನೋಟು ರದ್ದತಿ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯಕ್ತಿಯಲ್ಲೂ ವಿವರಣೆ ಕೇಳಬಹುದು. ಆದರೆ ಜನವರಿ 20ರಂದು ನಡೆಯಲಿರುವ ಸಭೆಯ ನಂತರವೇ ಈ ಬಗ್ಗೆ ಯೋಚಿಸಲಾಗುವುದು ಎಂದರು.
ಒಂದು ವೇಳೆ ಪ್ರಧಾನಿ ನೋಟಿಸ್ ನೀಡುವ ಬಗ್ಗೆ ನಮ್ಮ ಸದಸ್ಯರು ಒಮ್ಮತದ ತೀರ್ಮಾನ ತೆಗೆದುಕೊಂಡರೆ, ಪ್ರಧಾನಿಯವರಲ್ಲಿಯೂ ವಿವರಣೆ ಕೇಳಲಾಗುವುದು ಎಂದು ಥಾಮಸ್ ತಿಳಿಸಿದ್ದಾರೆ.
SCROLL FOR NEXT