ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಘಟನೆಯ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿ ನೌಕರರ ವಿಶೇಷ ನೋಂದಣಿ ಅಭಿಯಾನ-2017 ಅನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ನೌಕರರ ಭವಿಷ್ಯ ನಿಧಿ ಯೋಜನೆಯಿಂದ ಹೊರಗಿರುವ ನೌಕರರನ್ನು ಭವಿಷ್ಯ ನಿಧಿ ವ್ಯಾಪ್ತಿಗೆ ತರಲಾಗುತ್ತಿದೆ.
ಈ ಅಭಿಯಾನವು ಜನವರಿ 1, 2017ರಿಂದ ಮಾರ್ಚ್ 31, 2017ರವೆರೆಗೆ ಚಾಲ್ತಿಯಲ್ಲಿರಲಿದ್ದು, ಬೆಂಗಳೂರು ಸಹಾಯಕ ಭವಿಷ್ಯನಿಧಿ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಅವಕಾಶವನ್ನು ಎಲ್ಲಾ ಸಂಸ್ಥೆಗಳ ಮಾಲೀಕರು ಸದುಪಯೋಗಪಡಿಸಿಕೊಂಡು, ನೋಂದಣಿಯಾಗದಿರುವ ನೌಕರರನ್ನು ಭವಿಷ್ಯ ನಿಧಿ ವ್ಯಾಪ್ತಿಗೆ ತರುವ ಮೂಲಕ ಏಪ್ರಿಲ್ 1, 2009ರಿಂದ ಡಿಸೆಂಬರ್ 31, 2016ರವರೆಗಿನ ನೌಕರರ ಪಾಲಿನ ಭವಿಷ್ಯ ನಿಧಿ ವಂತಿಕೆಯ ರಿಯಾಯಿತಿ ಪಡೆಯಬೇಕೆಂದು ತಿಳಿಸಲಾಗಿದ್ದು, ಇದಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ.
ಭವಿಷ್ಯದಲ್ಲಿ ಭವಿಷ್ಯ ನಿಧಿಯ ಲಾಭ ಪಡೆಯಲು ಎಲ್ಲಾ ಸದಸ್ಯರು ಮತ್ತು ಪಿಂಚಣಿದಾರರು ತಮ್ಮ ಆಧಾರ ಕಾರ್ಡ್ ಸಂಖ್ಯೆಯನ್ನು ನಮೂದಿಸವುದು/ ಲಿಂಕ್ ಮಾಡವುದು ಕಡ್ಡಾಯಗೊಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೌಕರರ ಭವಿಷ್ಯ ನಿಧಿ ಸಂಘಟನೆಯ ವೆಬ್ ಸೈಟ್ www.epfindia.gov.in ಗೆ ಭೇಟಿ ನೀಡಿ.