ನೋಟು ನಿಷೇಧದ ಹೊರತಾಗಿಯೂ ಕೈಗಾರಿಕಾ ಉತ್ಪಾದನೆ ಶೇ.5.7 ಕ್ಕೆ ಏರಿಕೆ!
ನವದೆಹಲಿ: 500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯದ ಹೊರತಾಗಿಯೂ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದ ಬೆನ್ನಲ್ಲೇ, ಭಾರತದ ಕೈಗಾರಿಕಾ ಉತ್ಪಾದನೆ ಶೇ.5.7 ಕ್ಕೆ ಏರಿಕೆಯಾಗಿರುವುದರ ಬಗ್ಗೆ ವರದಿ ಪ್ರಕಟವಾಗಿದೆ.
ಅಚ್ಚರಿಯೆಂದರೆ ನೋಟು ನಿಷೇಧದ ಬಳಿಕವೂ ಕೈಗಾರಿಕಾ ಉತ್ಪಾದನೆ ಕಳೆದ 13 ತಿಂಗಳುಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡಿದ್ದು ಶೇ.5.7 ರಷ್ಟಾಗಿದೆ. ಇನ್ನು ಡಿಸೆಂಬರ್ ನ ಸಗಟು ಹಣದುಬ್ಬರ ಸಹ 25 ತಿಂಗಳಲ್ಲಿ ಅತ್ಯಂತ ಕಡಿಮೆ ದಾಖಲಾಗಿದ್ದು, ಆರ್ ಬಿಐ ಫೆಬ್ರವರಿಯಲ್ಲಿ ಮಂಡಿಸಲಿರುವ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಹುಟ್ಟಿಸಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ನೋಟು ಅಮಾನ್ಯದ ನಿರ್ಧಾರ ಕೈಗಾರಿಕಾ ಉತ್ಪನ್ನದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗಿದ್ದು, ಕೈಗಾರಿಕಾ ಉತ್ಪಾದನೆ ಡಾಟಾ ಸದ್ಯಕ್ಕೆ ಅಸ್ಥಿರವಾಗಿದ್ದು, ಪರಿಷ್ಕರಣೆ ಅಗತ್ಯವಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ ತಿಂಗಳಿಗೂ ಮುನ್ನ ಕೈಗಾರಿಕಾ ಉತ್ಪಾದನೆ ದರ ಶೇ.3.4 ರಷ್ಟಿತ್ತು. ಅಕ್ಟೋಬರ್ ತಿಂಗಳಲ್ಲಿ ಶೇ.1.8 ರಷ್ಟು ಕುಸಿದಿದ್ದ ಕೈಗಾರಿಕಾ ಉತ್ಪಾದನೆ ನವೆಂಬರ್ ತಿಂಗಳಲ್ಲಿ ಶೇ.5.7 ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆಯ ಮೇಲೆ ನೋಟು ನಿಷೇಧದ ಪರಿಣಾಮದ ಬಗ್ಗೆ ಅಂತಿಮ ನಿರ್ಧಾರ ಪ್ರಕಾಟಿಸುವುದಕ್ಕೆ ಇದು ಸೂಕ್ತ ಸಮಯವಲ್ಲ. ಕೈಗಾರಿಕಾ ಉತ್ಪಾದನೆಯ ಮೇಲೆ ನೋಟು ಅಮಾನ್ಯದ ಪರಿಣಾಮವನ್ನು ಸಂಪೂರ್ಣವಾಗಿ ಅರಿಯಲು ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆದರೂ ಉತ್ಪಾದನೆಯ ವಲಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಗಾಧವಾದ ಬೆಳವಣಿಗೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics