ಈಗಲೂ ಭಾರತವೇ ಕ್ಷಿಪ್ರ ಆರ್ಥಿಕ ಬೆಳವಣಿಗೆ ಇರುವ ರಾಷ್ಟ್ರ, 2017 ರಲ್ಲಿ ಶೇ.7.7 ರಷ್ಟಾಗಲಿದೆ: ಯುಎನ್ ವರದಿ!
ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ (ಐಎಂಎಫ್) ವಿಶ್ವ ಆರ್ಥಿಕ ಮುನ್ನೋಟ/ಅಂದಾಜು ಮಂಡಿಸಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಕಡಿತಗೊಳಿಸಿದ್ದ ಬೆನ್ನಲ್ಲೇ ವಿಶ್ವಸಂಸ್ಥೆ ವರದಿಯೊಂದನ್ನು ಪ್ರಕಟಿಸಿದ್ದು, ಈಗಲೂ ಭಾರತವೇ ಅತ್ಯಂತ ಕ್ಷಿಪ್ರ ಆರ್ಥಿಕ ಬೆಳವಣಿಗೆ ಹೊಂದಿರುವ ರಾಷ್ಟ್ರ ಎಂದು ಹೇಳಿದೆ.
2017 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.7 ರಷ್ಟಾಗಲಿರಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ನಿರೀಕ್ಷೆಗಳ(ಡಬ್ಲ್ಯೂಇಎಸ್ ಪಿ)೦2017 ವರದಿಯಲ್ಲಿ ಪ್ರಕಟಿಸಿದೆ. ಆಂತರಿಕ ಸುಧಾರಣೆಗಳ ಪರಿಣಾಮವಾಗಿ ಆರ್ಥಿಕತೆ ಬೆಳವಣಿಗೆ ಕಾಣಲಿದೆ ಎಂದು ವರದಿಯಲ್ಲಿ ವಿಶ್ವಸಂಸ್ಥೆ ಹೇಳಿದೆ. ಇದಕ್ಕೂ ಮುನ್ನ ಅಂದಾಜು ಮುನ್ನೋಟ ಪ್ರಕಟಿಸಿದ್ದ ಐಎಂಎಫ್ ನೋಟು ಅಮಾನ್ಯದ ಪರಿಣಾಮವಾಗಿ ಭಾರತದ ಆರ್ಥಿಕ ಬೆಳವಣಿಗೆ ತಾತ್ಕಾಲಿಕವಾಗಿ ಕಡಿಮೆಯಾಗಲಿದ್ದು ಶೇ.6.6 ಕ್ಕೆ ಕುಸಿಯಲಿದೆ ಎಂದು ಹೇಳಿತ್ತು. ಆದರೆ 2018 ರ ವೇಳೆಗೆ ಭಾರತದ ಆರ್ಥಿಕತೆ ಶೇ.7.7 ಕ್ಕೆ ಪುಟಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು.
ಇದೇ ವೇಳೆ ಕೆಲವು ಎಚ್ಚರಿಕೆಗಳನ್ನೂ ನೀಡಿರುವ ವಿಶ್ವಸಂಸ್ಥೆ ವರದಿ ಉದ್ಯಮ ಉತ್ಪಾದನೆಯ ಪ್ರಮಾಣ ಕುಸಿಯಲಿದೆ ಎಂದಿದ್ದು, ಬ್ಯಾಂಕ್ ಹಾಗೂ ಉದ್ಯಮದ ಬ್ಯಾಲೆನ್ಸ್ ಶೀಟ್(ಆಯ ವ್ಯಯಗಳು) ತಾತ್ಕಾಲಿಕವಾಗಿ ಬಂಡವಾಳ ಪುನಶ್ಚೇತನಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ನೋಟು ನಿಷೇಧದ ಹೊಡೆತದ ಹೊರತಾಗಿಯೂ ಭಾರತದ ಆರ್ಥಿಕತೆ 2017 ರಲ್ಲಿ ಚೀನಾವನ್ನು ಮೀರಿಸಲಿದ್ದು ಚೀನಾದ ಆರ್ಥಿಕ ಬೆಳವಣಿಗೆ 2018-17 ರಲ್ಲಿ ಶೇ.6.5 ರಷ್ಟೇ ಇರಲಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ನೋಟು ನಿಷೇಧದ ಬಗ್ಗೆ ಉಲ್ಲೇಖ ಮಾಡದ ವಿಶ್ವಸಂಸ್ಥೆ ವರದಿ ಜಿಎಸ್ ಟಿ ಕುರಿತು ಉಲ್ಲೇಖಿಸಿದ್ದು, ಉದ್ಯಮ ಸ್ಥಾಪಿಸುವ ಪ್ರಕ್ರಿಯೆ ಸರಳೀಕರಣ, ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಯೋಜನೆ(ಪಿಪಿಪಿ) ನೆಡೆಗೆ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಜಿಎಸ್ ಟಿ ಸೇರಿದಂತೆ ಸುಧಾರಣಾ ಕ್ರಮಗಳ ಜಾರಿ ಹೂಡಿಕೆಯ ಬೇಡಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos